ಬೆಂಗಳೂರು : ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುಡುಗು ಮತ್ತು ಸಿಡಿಲು ಬಡಿತದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಪ್ರಾಧಿಕಾರದಿಂದ ಗುಡುಗು ಮತ್ತು ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಾರ್ವಜನಿಕರು ಅವುಗಳನ್ನು ಕಡ್ಡಾಯವಾಗಿ ಪಾಲಿಸಿ, ನೈಸರ್ಗಿಕ ಅವಘಡಗಳಿಂದ ಆಗುವ ಹಾನಿಯಿಂದಾಗಿ ತಪ್ಪಿಸಿಕೊಳ್ಳಬಹುದಾಗಿದೆ.
ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಿಡಿಲು ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೂಚಿಸಿದೆ.
ಸಾರ್ವಜನಿಕರಿಗೆ ಗುಡುಗು ಮತ್ತು ಸಿಡಿಲಿನಿಂದ ಸಾರ್ವಜನಿಕರು ಮತ್ತು ಜಾನುವಾರು ಪ್ರಾಣಹಾನಿಗಳನ್ನು ತಪ್ಪಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಈ ಕೆಳಕಂಡ ಸಲಹೆಗಳನ್ನು ನೀಡಿದೆ
ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಪಾಲಿಸಬೇಕಾದ ಸಲಹೆ ಸೂಚನೆಗಳು
ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗುವುದು ಸೂಕ್ತವಲ್ಲ.
ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಲ್ಲಿ ಅಶ್ರಯ ಪಡೆಯುವುದು.
ಬೆಟ್ಟ ಗುಡ್ಡಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಇಳಿದು ಆಶ್ರಯ ಪಡೆಯಬಹುದು.
ನೀರಿನ ಮೂಲಗಳಾದ ಕೆರೆ, ತೋಡು ಮತ್ತು ನದಿಗಳಿಂದ ದೂರವಿರುವುದು.
ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ. ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರುವುದು.
ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು.
ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ, ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು.
ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸಾಕಷ್ಟು ಸಮಯವಿಲ್ಲದಿದ್ದರೆ, ಎರಡು ಕಾಲುಗಳನ್ನು ಜೋಡಿಸಿ ಮಂಡಿಯೂರಿ ಕುಳಿತುಕೊಂಡು ತಲೆಯನ್ನು ಬಗ್ಗಿಸಿ ಕಿವಿಗಳನ್ನು ಮುಚ್ಚಿಕೊಳ್ಳುವುದು.
ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ ಮುನ್ನಚ್ಚರಿಕೆಗಳಿಗಾಗಿ SACHET APP, DAMINI APP, SIDILU APP ಹಾಗೂ Common Alerting Protocol (CAP) ಮುಖಾಂತರ ಬರುವ ಮೆಸೇಜ್‌ಗಳನ್ನು ಗಮನಿಸಿಸುವುದು.
ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಅಶ್ರಯ ಪಡೆಯಬಾರದು. ಇವು ಮಿಂಚನ್ನು ಆಕರ್ಷಿಸುತ್ತವೆ.
ಲೋಹದ ವಸ್ತುಗಳನ್ನು ಬಳಸಬಾರದು ಮತ್ತು ಬೈಕುಗಳು, ವಿದ್ಯುತ್ ಅಥವಾ ದೂರವಾಣಿ ಕಂಬಗಳು. ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರುವುದು.