ಬೆಂಗಳೂರು : ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಲು ಶೇ.75ಕ್ಕಿಂತ ಕಡಿಮೆ ಹಾಜರಾತಿ ಇದ್ದಲ್ಲಿ ಪರೀಕ್ಷೆ-2 ಮತ್ತು 3ಕ್ಕೂ ನೋಂದಣಿಗೆ ಅವಕಾಶ ಇಲ್ಲದ ಕುರಿತು ಹಾಗೂ ಮರು ದಾಖಲಾತಿಯಾಗುವ ಬಗ್ಗೆ ಪ್ರಕಟವಾಗಿರುವ ಸುದ್ದಿಯ ಕುರಿತು ಕರ್ನಾಟಕ ಶಾಲಾ ಪರೀಕ್ಷೆ, ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟನೆ ನೀಡಿದೆ.
ಶೇ.75 ಕ್ಕಿಂತ ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ-1, 2 ಮತ್ತು 3ಕ್ಕೆ ನೋಂದಣಿಗೆ ಅವಕಾಶ ವಿಲ್ಲದಿರುವ ಕುರಿತು ಮಂಡಲಿಯಿಂದ ಸುತ್ತೋಲೆ ಪ್ರಕಟವಾಗಿದ್ದು ಹಾಗೂ ಸದರಿ ವಿದ್ಯಾರ್ಥಿಗಳು 2025-26ನೇ ಶೈಕ್ಷಣಿಕ ಸಾಲಿಗೆ ಮರುದಾಖಲಾತಿಯಾಗಲು ಸುತ್ತೋಲೆಯಲ್ಲಿ ತಿಳಿಸಲಾಗಿದೆಯೆಂದು ವರದಿಯಾಗಿದೆ.
ಮಂಡಳಿಯ ಕಾಯ್ದೆ-1966 ನಿಯಮ-37 ರನ್ನಯ, ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲು ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿರುವ ದಿನಗಳಿಗೆ ಅನುಸಾರ ಕನಿಷ್ಠ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿರುತ್ತದೆ. ಆದರೆ 2024ರ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಶೇ.75 ಕ್ಕಿಂತ ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿತದೃಷ್ಟಿಯಿಂದ ಪರೀಕ್ಷೆ-2 ಮತ್ತು 3ಕ್ಕೆ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಮಾಡಿ ಪರೀಕ್ಷೆ ಹಾಜರಾಗಲು ಅವಕಾಶ ಕಲ್ಪಿಸಲಾಗಿತ್ತು. ಇದೇ ರೀತಿ 2024-25ನೇ ಸಾಲಿನ ಪರೀಕ್ಷೆಗೂ ಸಹ ಸದರಿ ನಿಯಮವನ್ನು ಮುಂದುವರೆಸಲಾಗುವುದು. ಹಾಜರಾತಿ ಹಾಗೂ ಪರೀಕ್ಷೆ ನಿಯಮಗಳಿಗೆ ಸಂಬಂಧಪಟ್ಟಂತೆ ಯಾವುದೇ ಬದಲಾವಣೆ ಇರುವುದಿಲ್ಲ. ಹಿಂದಿನ ಸಾಲಿಸಂತೆಯೇ ಇರುತ್ತದೆ.