ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಸೇರಿದಂತೆ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಆಗಿರುತ್ತದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಪ್ಪಳ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಳ್ಳಾರಿ ರೀಡ್ಸ್ ಸಂಸ್ಥೆ ಹಾಗೂ ಬೆಳಗಾವಿ ಸ್ಪಂದನಾ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಿದ್ದ “ಬಾಲ್ಯವಿವಾಹ ನಿಷೇಧ ಕಾಯ್ದೆ-2006, ಕರ್ನಾಟಕ ತಿದ್ದುಪಡಿ-2016 ಹಾಗೂ ಹದಿಹರೆಯದ ಮಕ್ಕಳ ಸಬಲೀಕರಣ ಕುರಿತು ವಿವಿಧ ಭಾಗೀದಾರರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಬಾಲ್ಯವಿವಾಹವನ್ನು ಮಾಡಿಸಿದ ಪಾಸ್ಟರ್(ಪಾದ್ರಿ)ರವರಿಗೆ ಶಿಕ್ಷೆಯಾಗಿದೆ. ಕಲ್ಯಾಣ ಮಂಟಪಗಳ ಮಾಲೀಕರು, ಸಾಮೂಹಿಕ ವಿವಾಹ ಆಯೋಜಕರ ವಿರುದ್ಧವೂ ಸಹ ಪ್ರಕರಣಗಳು ದಾಖಲಾಗಿವೆ. ಹಾಗಾಗಿ ತಾವುಗಳು ಬಾಲ್ಯವಿವಾಹದಲ್ಲಿ ಭಾಗವಹಿಸಬೇಡಿ ಮತ್ತು ತಮ್ಮ ವ್ಯಾಪ್ತಿಯಲ್ಲಿ ಬಾಲ್ಯವಿವಾಹಗಳಿಗೆ ಅವಕಾಶ ನೀಡಬೇಡಿ ಎಂದು ತಿಳಿಸಿದರು.
ಬಾಲ್ಯ ವಿವಾಹ ಒಂದು ಶಿಕ್ಷಾರ್ಹ ಅಪರಾಧ, ಅದು ಯಾರ ಗಮನಕ್ಕೆ ಬರುತ್ತದೆಯೊ ಅವರು ಅದನ್ನು ತಡೆಗಟ್ಟುವುದು ಆದ್ಯ ಕರ್ತವ್ಯ ಆಗಿದೆ. ತಪ್ಪಿದಲ್ಲಿ ಸರ್ಕಾರವು ಬಾಲ್ಯವಿವಾಹವನ್ನು ನೆರವೇರಿಸಿದ, ಪ್ರೋತ್ಸಾಹಿಸಿದ ಮತ್ತು ಪಾಲ್ಗೊಂಡವರಿಗೂ ಸಹ 1 ರಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಗೆ 1ಲಕ್ಷ ರೂ.ದಂಡವನ್ನು ವಿಧಿಸಬಹುದಾಗಿದೆ ಮತ್ತು ಮುಂದುವರೆದು ಬಾಲ್ಯವಿವಾಹ ಮಾಡಲು ಪ್ರಯತ್ನಿಸಿದರು ಸಹ ಅಪರಾಧವೆಂದು ಕರ್ನಾಟಕ ಸರಕಾರವು ತಿದ್ದುಪಡಿಯನ್ನು ತಂದಿದ್ದು, ರಾಷ್ಟಪತಿಗಳ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದರು.
ಕೊಪ್ಪಳ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಹಿಂದೂ, ಮುಸ್ಲಿಂ ಮತ್ತು ಕ್ರೆöÊಸ್ತ ಈ ಯಾವುದೇ ಧಾರ್ಮಿಕ ಮಂದಿರಗಳಿಗೆ ಬರುವ ಸಾರ್ವಜನಿಕರಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆಯ ಕುರಿತು ಜಾಗೃತಿಯನ್ನು ಮೂಡಿಸಿ ಬಾಲ್ಯವಿವಾಹ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತದೊಂದಿಗೆ ಎಲ್ಲರೂ ಕೈ ಜೋಡಿಸಿ ಎಂದು ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಮಕ್ಕಳ ಬಾಲ್ಯವು ಅತ್ಯಮೂಲ್ಯವಾದದ್ದು, 18 ವರ್ಷದೊಳಗಿನ ಮಕ್ಕಳಲ್ಲಿ ದೈಹಿಕ, ಮಾನಸಿಕ, ಸಾಮಾಜಿಕ, ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಯು ತೀವ್ರವಾಗಿರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಅವರ ಹಕ್ಕುಗಳನ್ನು ಅನುಭವಿಸುವಂತಹ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳಿಗೆ ವಿವಾಹವನ್ನು ಮಾಡಿದರೆ ಅವರ ಬೆಳವಣಿಗೆ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಅಲ್ಲದೇ ಮಕ್ಕಳ ಮೇಲೆ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಹಲ್ಲೆಗಳು ಘಟಿಸುತ್ತವೆ. ಸದ್ಯ ಜಾರಿಯಲ್ಲಿರುವ ಕಾನೂನಿನ್ವಯ ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವು ಸಹ ಅತ್ಯಾಚಾರವಾಗಿರುತ್ತದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ವಿಶ್ಲೇಷಿಸಲಾಗಿ ಈ ರೀತಿಯ ಪ್ರಕರಣಗಳೇ ಅಧಿಕವಾಗಿವೆ. ಆದ್ದರಿಂದ ಬಾಲ್ಯ ವಿವಾಹಗಳಲ್ಲಿ ಭಾಗವಹಿಸಬೇಡಿ, ಬಾಲ್ಯವಿವಾಹಗಳಿಗೆ ಅವಕಾಶವನ್ನು ನೀಡಬೇಡಿ ಮತ್ತು ಕಾಯ್ದೆಯ ಕುರಿತು ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸಿ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ.ಕೆ. ರಾಘವೇಂದ್ರ ಭಟ್ ಅವರು ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ-2016ರ ಕುರಿತು ಹಾಗೂ ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕ ಹರೀಶ ಜೋಗಿ ಅವರು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯ ಕುರಿತು ತರಬೇತಿಯನ್ನು ನೀಡಿದರು.
ಪೋಸ್ಟರ್ ಬಿಡುಗಡೆ :
ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಬಾಲ್ಯ ವಿವಾಹ ಕಾನೂನು ಪ್ರಕಾರ ಅಪರಾಧ, ಗಮನಿಸಿ ಎಂಬ ಪೋಸ್ಟರ್ ಹಾಗೂ 2025 ರ ನವೆಂಬರ್ ನಿಂದ 2026 ರ ಜನವರಿ ವರೆಗೆ ಹಮ್ಮಿಕೊಂಡಿರುವ ಬಾಲ್ಯ ವಿವಾಹ ಮುಕ್ತ ಭಾರತ ಎಂಬ ನೂರು ದಿನಗಳ ಅಭಿಯಾನದ ಬ್ಯಾನರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಡಿವೈ.ಎಸ್ಪಿ ಮುತ್ತಣ್ಣ ಸವರಗೋಳ, ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ್, ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಹಾಂತಸ್ವಾಮಿ ಪೂಜಾರ, ಬೆಳಗಾವಿ ಸ್ಪಂದನ ಸೊಸೈಟಿ ಕಾರ್ಯದರ್ಶಿ ಸುಶೀಲಾ ವಿ. ಮತ್ತು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮೂಹಿಕ ವಿವಾಹ ಆಯೋಜಕರು, ಪೂಜಾರಿಗಳು, ಮೌಲ್ವಿಗಳು, ಪಾದ್ರಿಗಳು, ಡೇಕೊರೇರ್ಸ್, ಛಾಯಾಚಿತ್ರಗಾರರು, ಮುದ್ರಣಕಾರರು, ಕಲ್ಯಾಣ ಮಂಟಪಗಳ ಮಾಲೀಕರುಗಳು ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.








