ಬೆಂಗಳೂರು : ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (ಇಂಡಿಯನ್ ಇನ್ಸಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್ – ಐಐಎ) ರಾಜ್ಯಾದ್ಯಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ವಹಿಸುತ್ತಿರುವ ಗ್ರಾಮೀಣ ಗ್ರಂಥಾಲಯಗಳಾದ ಅರಿವು ಕೇಂದ್ರಗಳ ಮೂಲಕ ಖಗೋಳ ವಿಜ್ಞಾನವನ್ನು ಉತ್ತೇಜಿಸಲು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರಾಜ್ಯದಲ್ಲಿ ಸುಮಾರು 6000 ಅರಿವು ಕೇಂದ್ರಗಳನ್ನು ನಿರ್ವಹಿಸುತ್ತಿದ್ದು, ಇವು ಪ್ರಾಥಮಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿದ್ದು ಇವುಗಳನ್ನು ಗ್ರಂಥಾಲಯ ಮೇಲ್ವಿಚಾರಕರು ನಿರ್ವಹಿಸುತ್ತಿದ್ದಾರೆ.
ಖಗೋಳ ಭೌತಶಾಸ್ತ್ರ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಂತೆ ಖಗೋಳ ವಿಜ್ಞಾನದಲ್ಲಿ ಅರಿವು ಮತ್ತು ಆಸಕ್ತಿಯನ್ನು ಉತ್ತೇಜಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಯೊಂದಿಗೆ ಸಂಸ್ಥೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದೆ ಹಾಗೂ ಅರಿವು ಕೇಂದ್ರಗಳು ಸೇವೆ ಸಲ್ಲಿಸುವ ಪ್ರದೇಶಗಳ ಸಮುದಾಯಗಳಲ್ಲಿ ವಿಜ್ಞಾನ ಸಾಕ್ಷರತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುತ್ತದೆ. ಮೇಲ್ವಿಚಾರಕರ ತರಬೇತಿ ಮತ್ತು ಮಾರ್ಗದರ್ಶನ, ಕನ್ನಡದಲ್ಲಿ ಖಗೋಳ ವಿಜ್ಞಾನ ಸಂಪನ್ಮೂಲಗಳ ರಚನೆ ಮತ್ತು ಆಕಾಶಕಾಯಗಳ ಘಟನೆಗಳ ಸುತ್ತ ಸಾರ್ವಜನಿಕ ಚಟುವಟಿಕೆಗಳನ್ನು ಆಯೋಜಿಸಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದೆ.
ಸಾರ್ವಜನಿಕರು, ವಿಶೇಷವಾಗಿ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ನೀಡುವುದು, ಅರಿವು ಕೇಂದ್ರಗಳಲ್ಲಿನ ಕಂಪ್ಯೂಟರ್ ಲ್ಯಾಬ್ಗಳ ಮೂಲಕ ಚರ್ಚೆ ಹಾಗೂ ಸ್ಪರ್ಧೆಗಳನ್ನು ಏರ್ಪಡಿಸುವುದು ಮತ್ತು ಡಿಜಿಟಲ್ ಪರಿಕರಗಳ ರೂಪದಲ್ಲಿ ಆನ್ಲೈನ್ ಸಂವಹನಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದಲ್ಲದೇ, ಸಣ್ಣ ದೂರದರ್ಶಕಗಳ ಬಳಕೆಯ ತರಬೇತಿಯನ್ನೂ ಸಹ ನೀಡಲಾಗುವುದು.
ಭಾರತೀಯ ಖಗೋಳ, ಭೌತಶಾಸ್ತ್ರ ಸಂಸ್ಥೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಡುವೆ ಆಗಿರುವ ಒಪ್ಪಂದದಂತೆ ಬರಿಗಣ್ಣಿನಿಂದ ನೋಡಬಹುದಾದ ಖಗೋಳ ವಿಜ್ಞಾನ ಘಟನೆಗಳ ಬಗ್ಗೆ ಮತ್ತು ವಿವರಗಳನ್ನು ಕನ್ನಡದಲ್ಲಿ ಒದಗಿಸಲು ಅನುವು ಮಾಡಿಕೊಡಲಾಗುತ್ತದೆ. ಗ್ರಾಮೀಣ ಅರಿವು ಕೇಂದ್ರಗಳು ಇನ್ನು ಖಗೋಳ ವಿಜ್ಞಾನ ಕೇಂದ್ರಗಳಾಗಲಿವೆ.