ಬೆಂಗಳೂರು: ಶಾಲಾ ಅವಧಿಯಲ್ಲಿ ಮತದಾರ ಪಟ್ಟಿ ಪರಿಷ್ಕರಣೆ, ಬೂತ್ ಮಟ್ಟ ಅಧಿಕಾರಿಗಳಾಗಿ ಶಾಲಾ ಶಿಕ್ಷಕರನ್ನು ನೇಮಕ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕೇತರ ಸಿಬ್ಬಂದಿಯನ್ನು ಈ ಕಾರ್ಯಗಳಿಗೆ ಆದ್ಯತೆ ಮೇಲೆ ನಿಯೋಜಿಸುವಂತೆ ಸರ್ಕಾರ ಸೂಚಿಸಿದೆ.
ಈ ಸಂಬಂಧ ಸರ್ಕಾರದ ಮುಖ್ಯ ಕಾವ್ಯದರ್ಶಿ ಶಾಲಿನಿ ರಜನೀಶ್ ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಚುನಾವಣಾ ಕರ್ತವ್ಯಗಳಿಗೆ ಆದ್ಯತೆ ಮೇರೆಗೆ ವಿವಿಧ ಇಲಾಖೆಗಳಲ್ಲಿ ಕಾರನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿ ಹಾಗೂ ಶಿಕ್ಷಕೇತರ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಎಚ್ಆರ್ಎಂಎಸ್ ತಂತ್ರಾಂಶದಲ್ಲಿ ಲಭ್ಯವಿರುವ ಮಾಹಿತಿಯಂತೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಅಧಿಕಾರಿ/ ನೌಕರರ ವಿವರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಒದಗಿಸಿರುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ ಶಿಕ್ಷಕರನ್ನು ಚುನಾವಣಾ ಸಂಬಂಧಿತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಳಿಗೆ ಹಾಗೂ ಬೂತ್ ಮಟ್ಟದ ಅಧಿಕಾರಿಗಳಾಗಿ (BLOs) ನಿಯೋಜನೆ ಮಾಡಲಾಗುತ್ತಿದ್ದು, ಇದರಿಂದಾಗಿ ಶಾಲೆಗಳಲ್ಲಿ ಪಠ್ಯಕ್ರಮ ಗಳು ಸಮಯಕ್ಕೆ ಸರಿಯಾಗಿ ಆಗದೇ ಶಾಲೆಗಳಲ್ಲಿ ಮಕ್ಕಳ ಪ್ರಗತಿ ಕುಂಠಿತವಾಗುತ್ತಿರುವುದಾಗಿ ಹಾಗೂ ಶಿಕ್ಷಣದ ಗುಣಮಟ್ಟ ಕಡಿಮೆ ಯಾಗುತ್ತಿರುವುದಾಗಿ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳು ಮನವಿ ಮಾಡಿರುತ್ತಾರೆ. (ಮುಖ್ಯ ಚುನಾವಣಾಧಿಕಾರಿಗಳ ಪತ್ರ ಲಗತ್ತಿಸಿದೆ.)
ಅಲ್ಲದೆ, ಸಿವಿಲ್ ಅಪೀಲ್ ಸಂಖ್ಯೆ 5659/2007ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ:06.12.2007ರಂದು ನೀಡಿರುವ ಆದೇಶಲ್ಲಿ ಸಾಮಾನ್ಯವಾಗಿ ರಜಾ ದಿನಗಳು, ಬೋಧಕೇತರ ದಿನಗಳು ಹಾಗೂ ಬೋಧಕೇತರ ಅವಧಿಯಲ್ಲಿ ಶಾಲಾ ಶಿಕ್ಷಕರ ಸೇವೆಯನ್ನು ಬಳಸಿ ಕೊಳ್ಳುವಂತೆ ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಯಾವುದೇ ಸಂದರ್ಭದಲ್ಲಿಯಾದರೂ ಚುನಾವಣಾ ಕರ್ತವ್ಯಗಳಿಗೆ ನಿಯೋಜಿಸು ವಂತೆ ಸೂಚನೆ ನೀಡಲಾಗಿದೆ. ಅದರಂತೆ, ಹೆಚ್.ಆರ್.ಎಂ.ಎಸ್.ನಿಂದ 4/1 ಪಡೆದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಅಧಿಕಾರಿ/ ನೌಕರರ ವಿವರನ್ನು ಇದರೊಂದಿಗೆ ಲಗತ್ತಿಸಿದೆ.