ಬೆಂಗಳೂರು : ವಸತಿ ಮತ್ತು ವಸತಿಯೇತರ ಭೂ ಪರಿವರ್ತಿತ ಜಮೀನುಗಳ ಏಕನಿವೇಶನ ವಿನ್ಯಾಸಗಳಿಗೆ ಅನುಮೋದನೆ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕರಾವಳಿ ಭಾಗದಲ್ಲಿ ವಸತಿ ಮತ್ತು ವಾಣಿಜ್ಯ ಭೂ ಪರಿವರ್ತಿತ ಜಮೀನುಗಳ ಏಕನಿವೇಶನ ವಿನ್ಯಾಸಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿ Farm House/ಭೂ ಪರಿವರ್ತಿತ ಜಮೀನಿನಲ್ಲಿ ಏಕನಿವೇಶನ ವಿನ್ಯಾಸಗಳಲ್ಲಿ ಕಟ್ಟಡ ನಿರ್ಮಿಸಲು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ಸಾರ್ವಜನಿಕ ರಸ್ತೆಯ ಸಂಪರ್ಕವನ್ನು ಕಡ್ಡಾಯಗೊಳಿಸಲಾಗುತ್ತಿರುವುದರಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಲಾಗಿರುತ್ತದೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸಕ್ಷಮಪ್ರಾಧಿಕಾರಗಳು ನಿಯಮಾನುಸಾರ ಕ್ರಮ ಜರುಗಿಸಿ ತಾಂತ್ರಿಕ ಅನುಮೋದನೆಗಳನ್ನು ನೀಡಲು ಸರ್ಕಾರದಿಂದ ಸ್ಪಷ್ಟ ನಿರ್ದೇಶನವನ್ನು ನೀಡುವ ಅಗತ್ಯವಿರುವುದನ್ನು ಗಮನಿಸಲಾಗಿರುತ್ತದೆ. ಹಾಗಾಗಿ, ರಾಜ್ಯಾದ್ಯಂತ ಏಕರೂಪದ ಕ್ರಮ ಜರುಗಿಸುವ ಅಗತ್ಯವಿದ್ದು, ವಸತಿ ಮತ್ತು ವಸತಿಯೇತರ ಭೂ ಪರಿವರ್ತಿತ ಜಮೀನುಗಳಲ್ಲಿ ಏಕನಿವೇಶನ ವಿನ್ಯಾಸಗಳಿಗೆ ಅನುಮೋದನೆ ನೀಡುವ ಸಂದರ್ಭದಲ್ಲಿ ಹಾಗೂ farm house ಗಳಿಗೆ ಅನುಮತಿ ನೀಡುವ ಪ್ರಸ್ತಾವನೆಗಳಲ್ಲಿ ಸಾರ್ವಜನಿಕ ರಸ್ತೆಯ ಸಂಪರ್ಕದ ಕುರಿತು ಕೆಳಕಂಡಂತೆ ಪರಿಶೀಲಿಸಿ ತಾಂತ್ರಿಕ ಅನುಮೋದನೆ ನೀಡಲು ನಿರ್ದೇಶಿಸಲಾಗಿದೆ.
“ಸ್ವಂತ ಉಪಯೋಗದ Farm House/ ಕಟ್ಟಡಗಳಿಗೆ ಅನುಮೋದನೆ ನೀಡುವ ಕೆಲವೊಂದು ನಿರ್ದಿಷ್ಟವಾದ ಪ್ರಕರಣಗಳಲ್ಲಿ ಪ್ರಶ್ನಿತ ಜಮೀನಿಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಗೆ ಲಗತ್ತಾಗಿರುವ ಜಮೀನಿಗೆ ಒಳಪಡದೇ ಇರುವ ಭಾಗಶ: ಜಮೀನಿನಲ್ಲಿ ಕಟ್ಟಡ ನಿರ್ಮಿಸಿದಲ್ಲಿ ಭೂ-ಮಾಲೀಕರ ಮಾಲೀಕತ್ವದಲ್ಲಿರುವ ಜಮೀನಿನಿಂದ ಸಂಪರ್ಕ ಲಭ್ಯವಾಗುವುದರಿಂದ ಇಂತಹ ಪ್ರಸ್ತಾವನೆಗಳಿಗೆ ರಸ್ತೆಯ ಸಂಪರ್ಕ ಕಲ್ಪಿಸಲು ಪರಿತ್ಯಾಜನಾ ಪತ್ರ (relinquishment deed) ಮುಖಾಂತರ ರಸ್ತೆಯ ಜಾಗೆಯನ್ನು ಹಸ್ತಾಂತರಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಆದರೆ ಸದರಿ ಜಮೀನನ್ನು ವಿಭಜಿಸಿ ಬಹುನಿವೇಶನಗಳನ್ನು ರಚಿಸಿದಲ್ಲಿ ರಸ್ತೆ ಜಾಗವನ್ನು ಪರಿತ್ಯಾಜನಾ ಪತ್ರ (relinquishment deed) ಮುಖಾಂತರ ಹಸ್ತಾಂತರಿಸಿಕೊಳ್ಳಬೇಕಾಗಿರುತ್ತದೆ. ಹಾಗಾಗಿ ಸ್ವಂತ ಉಪಯೋಗಕ್ಕೆ ಕಟ್ಟಡಗಳಿಗೆ ಅನುಮೋದನೆ ನೀಡುವ ಪ್ರಸ್ತಾವನೆಗಳಲ್ಲಿ ಅರ್ಜಿದಾರರಿಂದ ಸದರಿ ಜಮೀನನ್ನು ಭವಿಷ್ಯದಲ್ಲಿ ವಿಭಜಿಸಿದಲ್ಲಿ ಅಥವಾ ಭೂ ಪರಿವರ್ತಿತ ಜಮೀನನ್ನು ಬೇರೆ ಮಾಲೀಕತ್ವಕ್ಕೆ ವರ್ಗಾವಣೆ/ಮಾರಾಟ ಮಾಡಿದಲ್ಲಿ ರಸ್ತೆ ಜಾಗೆಯನ್ನು ಪರಿತ್ಯಾಜನಾ ಪತ್ರ (relinquishment deed) ಮುಖಾಂತರ ಸಂಬಂಧಿಸಿದ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸುವ ಕುರಿತು ಪ್ರಮಾಣ ಪತ್ರ ಪಡೆದು, ಪ್ರಶ್ನಿತ ಜಮೀನನ್ನು ಉಪ ವಿಭಜಿಸುವ/ ಮಾರಾಟ ಮಾಡುವ ಸಂದರ್ಭದಲ್ಲಿ ರಸ್ತೆಯ ಜಾಗೆಯನ್ನು ಹಸ್ತಾಂತರಿಸುವ ಷರತ್ತನ್ನು ವಿನ್ಯಾಸ ಅನುಮೋದನೆ ಹಾಗೂ ಖಾತೆ ತೆರೆಯುವ ಸಮಯದಲ್ಲಿ ವಿಧಿಸಿ ಅನುಮೋದನೆ ನೀಡತಕ್ಕದ್ದು.









