ಬೆಂಗಳೂರು : ರಾಜ್ಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿ ಅಧಿಸೂಚನೆ ಹೊರಡಿಸಲಾಗಿದ್ದು, ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳು ಸೇರಿದಂತೆ ಒಟ್ಟು 173 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.
2026-27ನೇ ಸಾಲಿನಲ್ಲಿ ಪ್ರವೇಶ ಪ್ರಕ್ರಿಯೆಗಾಗಿ ಅರ್ಹವಿರುವ ವಿದ್ಯಾರ್ಥಿಗಳು ಆನ್‌ಲೈನಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅಲ್ಪಸಂಖ್ಯಾತರ ನಿರ್ದೇಶನಾಲಯದ ವಿವಿಧ ಮಾದರಿಯ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಎಲ್ಲಾ ಜಿಲ್ಲೆಗಳ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಇವರು ತಮ್ಮ ಅಧೀನದ ವಿವಿಧ ಮಾದರಿಯ ವಸತಿ ಶಾಲೆಗಳಲ್ಲಿ ಶೇ.100 ರಷ್ಟು ದಾಖಲಾತಿಯನ್ನು ಹೊಂದಲು ಜಿಲ್ಲಾ ಹಂತದಲ್ಲಿಯೇ ಪ್ರತ್ಯೇಕ ಪ್ರವೇಶಾತಿ ಅಧಿಸೂಚನೆ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುವುದು. ಸದರಿ ಅಧಿಸೂಚನೆಯ ಪತ್ರಿಕಾ ಪ್ರಕಟಣೆ ಹೊರಡಿಸಿ, ವ್ಯಾಪಕ ಪ್ರಚಾರ ಕೈಗೊಳ್ಳುವುದು. ನಿಯಾಮಾನುಸಾರ ಮೆರಿಟ್ ಹಾಗೂ ರೋಸ್ಟರ್ ಪದ್ಧತಿ ಪ್ರಕಾರ 6ನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ತಮ್ಮ ಅಧೀನದ ಅಧಿಕಾರಿ/ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಿ ದಾಖಲಾತಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವುದು.
ಮುಂದುವರೆದು, ಅರ್ಜಿ ಸಲ್ಲಿಸುವ ವಿಧಾನ, ಪ್ರವೇಶ ಪರೀಕ್ಷೆಯ ಪ್ರಕ್ರಿಯೆ, ಮೀಸಲಾತಿ ವಿವರ, ವೇಳಾಪಟ್ಟಿ ಮತ್ತು ದಾಖಲಾತಿಗೆ ಸಂಬಂಧಿಸಿದ ಇತರೆ ವಿವರಗಳ ಸಂಪೂರ್ಣ ಮಾರ್ಗಸೂಚಿಗಳನ್ನು ಸದರಿ ಅಧಿಸೂಚನೆಯೊಂದಿಗೆ ಲಗತ್ತಿಸಲಾಗಿದ್ದು, ಅದರಂತೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಂಡು ಶೇ.100 ರಷ್ಟು ದಾಖಲಾತಿಯನ್ನು ಸಾಧಿಸಲು ಸೂಚಿಸಿದೆ.
ಎಲ್ಲಾ ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೇರವಾಗಿ ಅರ್ಜಿಗಳನ್ನು ಹತ್ತಿರದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗಳು, ಅಲ್ಪ ಸಂಖ್ಯಾತರ ತಾಲ್ಲೂಕು ಮಾಹಿತಿ ಕೇಂದ್ರಗಳು ಮತ್ತು ಜಿಲ್ಲಾ ಅಲ್ಪ ಸಂಖ್ಯಾತರ ಅಧಿಕಾರಿ ಕಛೇರಿಗಳಲ್ಲಿಯೂ ಕೂಡ ಉಚಿತವಾಗಿ ಸಲ್ಲಿಸಬಹುದಾಗಿರುತ್ತದೆ.









