ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಳವಾಗುತ್ತಿದ್ದು, ಈ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 2 ದಿನ ಶೀತ ಅಲೆ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮಳೆ ಮೋಡ ಇಲ್ಲದ ಕಾರಣ ಶುಭ್ರಾಕಾಶ ನಿರ್ಮಾಣ, ಕನಿಷ್ಠ ಉಷ್ಣಾಂಶದಲ್ಲಿ ಸುಮಾರು 5 ಡಿಗ್ರಿ ಸೆಲ್ಸಿಯಸ್ ನಷ್ಟು ಇಳಿಕೆ ಹಾಗೂ ಉತ್ತರ ದಿಕ್ಕಿನಿಂದ ದಕ್ಷಿಣಕ್ಕೆ ಗಾಳಿ ಬೀಸುತ್ತಿರುವುದರಿಂದ ಉತ್ತರ ಒಳನಾಡಿನ ಬೀದರ್, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ 2 ದಿನ ಶೀತ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳೀಸಿದೆ.
ಬೆಂಗಳೂರಿನಲ್ಲಿ ಚಳಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ವಾಡಿಕೆಗಿಂತ 2 ರಿಂದ 3 ಡಿ.ಸೆ.ನಷ್ಟು ಕಡಿಮೆಯಾಗಿದೆ. ಶನಿವಾರ ಬೆಂಗಳೂರು ನಗರದಲ್ಲಿ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ 11 ಡಿ.ಸೆ. ವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ.