ಬೆಂಗಳೂರು: ಮಗ ದತ್ತು ಹೋದ ಮಾತ್ರಕ್ಕೆ ಆತ ಹೆತ್ತ ತಾಯಿಗೆ ಮಗನಲ್ಲ ಎನ್ನಲಾಗುತ್ತದೆಯೇ?” ಎಂದು ಪ್ರಶ್ನಿಸಿರುವ ಹೈಕೋರ್ಟ್, ಸಂಧ್ಯಾಕಾಲದಲ್ಲಿರುವ ಹೆತ್ತ ತಾಯಿಗೆ ಮಾಸಿಕ ₹8,000 ಜೀವನಾಂಶ ನೀಡುವಂತೆ ಮಗನಿಗೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮೆಗಳಾಪುರ ನಿವಾಸಿ ಎಂ.ಸಿ. ಚೇತನ್ ಎಂಬುವವರು ಈ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಚೇತನ್ ಅವರನ್ನು ಅವರ ಹೆತ್ತ ತಾಯಿ ಶಿವಲಿಂಗಮ್ಮ ಅವರು ತಮ್ಮ ಸಹೋದರಿ ಪುಟ್ಟಮ್ಮ ಅವರಿಗೆ ದತ್ತು ನೀಡಿದ್ದರು. ಕಾಲಾನಂತರದಲ್ಲಿ ಆರ್ಥಿಕ ಸಂಕಷ್ಟಕ್ಕೀಡಾದ ಶಿವಲಿಂಗಮ್ಮ, ತನ್ನ ಮಗನಿಂದ ಜೀವನಾಂಶ ಕೊಡಿಸುವಂತೆ ಮಳವಳ್ಳಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಕೆಳ ನ್ಯಾಯಾಲಯವು ಶಿವಲಿಂಗಮ್ಮ ಅವರಿಗೆ ಮಾಸಿಕ ₹8,000 ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಚೇತನ್ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಅರ್ಜಿದಾರರ ವಾದವನ್ನು ತಳ್ಳಿಹಾಕಿತು. ದತ್ತು ನೀಡಿದ ತಾಯಿಗೆ ಜೀವನಾಂಶ ನೀಡಲು ನಿರಾಕರಿಸಿದ ಮಗನ ವಿರುದ್ಧ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ದತ್ತು ನೀಡಿದ್ದರೂ ಹೆತ್ತ ತಾಯಿಗೆ ಅರ್ಜಿದಾರ ಮಗನಲ್ಲವೇ?” ಎಂದು ಖಾರವಾಗಿ ಪ್ರಶ್ನಿಸಿದರು.
ಅರ್ಜಿದಾರರ ಪರ ವಕೀಲರು ಮೊತ್ತವನ್ನು ಕಡಿಮೆ ಮಾಡಲು ಕೋರಿದಾಗ, ನ್ಯಾಯಮೂರ್ತಿಗಳು “ಈಗಾಗಲೇ ನಿಗದಿಪಡಿಸಿರುವ ₹8,000 ಮೊತ್ತ ಬಹಳ ಕಡಿಮೆ. ವಾದ ಮುಂದುವರಿಸಿದರೆ ಇದನ್ನು ₹16,000 ಕ್ಕೆ ಏರಿಸಬೇಕಾದೀತು” ಎಂದು ಎಚ್ಚರಿಸಿದರು.
ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಸೆಕ್ಷನ್ 125 ರ ಅಡಿಯಲ್ಲಿ ತಾಯಿಗೆ ಜೀವನಾಂಶ ಪಡೆಯುವ ಹಕ್ಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಅರ್ಜಿದಾರ ಚೇತನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿಹಿಡಿಯಿತು. ಪ್ರತಿ ತಿಂಗಳು ತಪ್ಪದೇ ₹8,000 ಜೀವನಾಂಶವನ್ನು ಹೆತ್ತ ತಾಯಿಗೆ ನೀಡಬೇಕು ಎಂದು ಆದೇಶಿಸಿತು.








