ಮುಂಬೈ: ವಿಚ್ಛೇದನ ಪಡೆದ ಮಹಿಳೆಯು ತನ್ನ ಮೃತ ಮಾಜಿ ಪತಿಯ ಆಸ್ತಿಯಿಂದ ಬಾಕಿ ಇರುವ ಜೀವನಾಂಶವನ್ನು (Alimony) ವಸೂಲಿ ಮಾಡಬಹುದು. ಆದರೆ, ಆ ಮೊತ್ತವನ್ನು ಹೆಚ್ಚಿಸಬೇಕು ಎಂದು ಕಾನೂನುಬದ್ಧವಾಗಿ ಕೋರುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂದು ವೇಳೆ ಇಂತಹ ಬೇಡಿಕೆಗಳಿಗೆ ಅವಕಾಶ ನೀಡಿದರೆ, ನ್ಯಾಯಾಲಯಗಳಲ್ಲಿ ಅರ್ಜಿಗಳ ಮಹಾಪೂರವೇ ಹರಿದುಬರಬಹುದು ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜೂಷಾ ದೇಶಪಾಂಡೆ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ.ಜೀವನಾಂಶದ ಮೊತ್ತದಲ್ಲಿ ಸೂಕ್ತ ಹೆಚ್ಚಳವನ್ನು ನಿರ್ಧರಿಸಲು ಪತ್ನಿಯ ಅಗತ್ಯತೆಗಳು ಮತ್ತು ಪತಿಯ ನೈಜ ಆರ್ಥಿಕ ಸಾಮರ್ಥ್ಯದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿರುತ್ತದೆ. ಆದರೆ, ಪತಿ ಈಗಾಗಲೇ ಮರಣ ಹೊಂದಿದ್ದರೆ, ಈ ನ್ಯಾಯಾಂಗ ಪ್ರಕ್ರಿಯೆಯ ಪ್ರಮುಖ ಭಾಗವೇ (ಪತಿಯ ಆರ್ಥಿಕ ಸ್ಥಿತಿಯ ಮೌಲ್ಯಮಾಪನ) ಇಲ್ಲದಂತಾಗುತ್ತದೆ.ಪತಿ ಮರಣ ಹೊಂದಿದರೆ ಪತ್ನಿಯು ಆತನ ಆಸ್ತಿ ಅಥವಾ ಉತ್ತರಾಧಿಕಾರಿಗಳಿಂದ ಕೇವಲ ಬಾಕಿ ಇರುವ ಜೀವನಾಂಶದ ಹಣವನ್ನು ಮಾತ್ರ ಪಡೆಯಬಹುದು. ದಂಪತಿಗಳ ನಡುವಿನ ಇತರ ವೈವಾಹಿಕ ವಿಷಯಗಳು ಹಾಗೂ ಹಕ್ಕುಗಳು ಸಂಗಾತಿಯ ಮರಣದೊಂದಿಗೆ ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತವೆ ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ 62 ವರ್ಷದ ವರ್ಷಾ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.
ನರೇನ್ ಗೋರೆಗಾಂವ್ಕರ್ ಮತ್ತು ವರ್ಷಾ ಅವರ ವಿವಾಹವು 1974 ರ ಜನವರಿಯಲ್ಲಿ ನಡೆದಿತ್ತು. ಆದರೆ ಕೇವಲ ಮೂರೇ ವರ್ಷಗಳಲ್ಲಿ (1977) ಇಬ್ಬರೂ ಬೇರೆಯಾಗಿದ್ದರು. ಇವರಿಗೆ ಯಾವುದೇ ಮಕ್ಕಳಿರಲಿಲ್ಲ. ತದನಂತರ 1980 ರಲ್ಲಿ ನರೇನ್ ಅವರಿಗೆ ವಿಚ್ಛೇದನ ಮಂಜೂರಾಯಿತು ಮತ್ತು ವರ್ಷಾ ಅವರಿಗೆ ಪ್ರತಿ ತಿಂಗಳು 6,000 ರೂಪಾಯಿ ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು.
ಮಾರ್ಚ್ 2012 ರಲ್ಲಿ ನರೇನ್ ಗೋರೆಗಾಂವ್ಕರ್ ನಿಧನರಾದರು. ಇದರ ಬೆನ್ನಲ್ಲೇ ವರ್ಷಾ ಅವರು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿ, ತಮಗೆ ಬರಬೇಕಾದ ಬಾಕಿ ಜೀವನಾಂಶವನ್ನು ವಸೂಲಿ ಮಾಡಿಕೊಡುವಂತೆ ಹಾಗೂ ಹೆಚ್ಚುತ್ತಿರುವ ಹಣದುಬ್ಬರ ಮತ್ತು ವೈದ್ಯಕೀಯ ವೆಚ್ಚಗಳನ್ನು ಪರಿಗಣಿಸಿ ಜೀವನಾಂಶದ ಮೊತ್ತವನ್ನು ಹೆಚ್ಚಿಸುವಂತೆ ಕೋರಿದ್ದರು.
ಫೆಬ್ರವರಿ 2023 ರಲ್ಲಿ ಕೌಟುಂಬಿಕ ನ್ಯಾಯಾಲಯವು ಮೃತ ಪತಿಯ ಆಸ್ತಿಯಿಂದ ಬಾಕಿ ಮೊತ್ತವನ್ನು ವಸೂಲಿ ಮಾಡಲು ಅನುಮತಿ ನೀಡಿತಾದರೂ, ಜೀವನಾಂಶದ ಮೊತ್ತವನ್ನು ಹೆಚ್ಚಿಸುವ ಬೇಡಿಕೆಯನ್ನು ತಿರಸ್ಕರಿಸಿತು. ಇದನ್ನು ಪ್ರಶ್ನಿಸಿ ವರ್ಷಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ನರೇನ್ ಅವರ ಕಾನೂನು ವಾರಸುದಾರರ ಪರ ವಾದ ಮಂಡಿಸಿದ ವಕೀಲ ಪ್ರದೀಪ್ ಚೌಹಾಣ್, “ಬಾಕಿ ಮೊತ್ತವನ್ನು ಆಸ್ತಿಯಿಂದ ವಸೂಲಿ ಮಾಡಬಹುದೇ ಹೊರತು, ಪತಿಯ ಮರಣದ ನಂತರ ಮೊತ್ತವನ್ನು ಹೆಚ್ಚಿಸಲು ಮಹಿಳೆಗೆ ಯಾವುದೇ ಹಕ್ಕಿಲ್ಲ” ಎಂದು ವಾದಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.








