ಬೆಂಗಳೂರು : ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣದ ಬೆನ್ನಲ್ಲೇ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ (ಗ್ಲುಕೋಸ್) ಬಳಕೆಯನ್ನು ತಡೆ ಹಿಡಿಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ 2600 ಸರ್ಜರಿಗಳಲ್ಲಿ, ಸಾಕಷ್ಟು ಸಿಸೇರಿಯನ್ ನಡೆದಿವೆ. ಇಂತಹ ಘಟನೆ ವರದಿಯಾಗಿರಲಿಲ್ಲ. ಮೊದಲ ಬಾರಿ ಇಂತಹ ದುರಂತ ಸಂಭವಿಸಿದೆ.
ಬಾಣಂತಿಯರ ಸಾವಿನ ಪ್ರಕರಣದಲ್ಲಿ ನಮಗೆ ಅನುಮಾನ ಇರುವುದು ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ ಮೇಲೆ. ದ್ರಾವಣ ಗುಣಮಟ್ಟದ ಪರೀಕ್ಷೆಗೆ ಕಳಿಸಿದ್ದೇವೆ. ವರದಿ ಬರಲು 8-9 ದಿನಗಳಾಗಬಹುದು. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೆವೆ ಎಂದರು.
ಕರ್ತವ್ಯಲೋಪದ ಆರೋಪದಲ್ಲಿ ಈಗಾಗಲೇ ಡ್ರಗ್ ಕಂಟ್ರೋಲರ್ ಉಮೇಶ್ ಅವರನ್ನು ಅಮಾನತ್ತು ಮಾಡಲಾಗಿದೆ. ಈ ಮೊದಲೇ ಕಂಪನಿಯನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದೇವು. ಆದರೆ ಕಂಪನಿಯವರು ಹೈಕೋರ್ಟ್ ನಿಂದ ದ್ರಾವಣ ಬಳಕೆಗೆ ಪ್ರಮಾಣಪತ್ರ ತಂದಿದ್ದಾರೆ. ಡ್ರಗ್ ಕಂಟ್ರೋಲ್ ನವರು 92 ಬ್ಯಾಚ್ ಪರೀಕ್ಷೆ ಮಾಡಿ, 22 ಬ್ಯಾಚ್ ಗಳಲ್ಲಿ ದ್ರಾವಣ ಸ್ಟ್ಯಾಂಡರ್ಡ್ ಕ್ವಾಲಿಟಿ ಹೊಂದಿಲ್ಲ ಎಂದಿದ್ದರು. ಇದರ ಆಧಾರದ ಮೇಲೆ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಈ 22 ಬ್ಯಾಚ್ ಗಳ ದ್ರಾವಣವನ್ನು ನಾವು ಆಸ್ಪತ್ರೆಗಳಿಗೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ಬಳ್ಳಾರಿ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷವಿಲ್ಲ ಎಂದು ತಜ್ಞರ ಸಮಿತಿ ವರದಿ ನೀಡಿದೆ. ಹೀಗಾಗಿ ಐವಿ ದ್ರಾವಣದ ಮೇಲೆ ಸಂಶಯ ಬಂದಿದ್ದು, ಈಗ ತಜ್ಞರ ಸಮಿತಿ ರಚಿಸಲಾಗಿದ್ದು, ಎಲ್ಲವನ್ನೂ ಪರಿಶೀಲನೆ ಮಾಡಲಿದ್ದಾರೆ. ಮೃತರ ಕುಟುಂಬಸ್ಥರಿಗೆ ಸರ್ಕಾರ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಸಾವಿಗೀಡಾದ ನಾಲ್ವರು ಬಾಣಂತಿಯರಲ್ಲಿ ಇಬ್ಬರು ಆರೋಗ್ಯವಂತರು. ಉತ್ತಮ ಆರೋಗ್ಯ ಹೊಂದಿದ್ದರೂ ಸಿಸೇರಿಯನ್ ವೇಳೆ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ ಎಂದರು.