ಬೆಂಗಳೂರು : ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 5 ಸಾವಿರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿಗಾಗಿ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಲವು ವರ್ಷಗಳಿಂದ ವಿವಿಧ ರೀತಿಯ ತೊಡಕುಗಳಿಂದ ನೆನೆಗುದಿಗೆ ಬಿದ್ದಿದ್ದ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತ ಗತಿಯಲ್ಲಿ ಕೈಗೊಂಡು, ಒಂದೇ ದಿನದಲ್ಲಿ ಕೌನ್ಸೆಲಿಂಗ್ ಹಾಗು ಆದೇಶ ಪತ್ರ ಸಹ ಹೊರಡಿಸಿದ್ದು, ಆಯ್ಕೆಯಾದ ಎಲ್ಲಾ ಸಹಾಯಕ ಪ್ರಾಧ್ಯಾಪಕರಿಗೆ ಅಭಿನಂದನೆಗಳನ್ನು ತಿಳಿಸಿ, ವೃತ್ತಿ ಮಾರ್ಗದರ್ಶನ ನೀಡುವ “ಹೊಸಹಾದಿ” ವಿಶೇಷ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಸಚಿವ ಡಾ.ಎಂ.ಸಿ. ಸುಧಾಕರ್ ಅವರು, ಮುಂದಿನ ಮಾಸಾಂತ್ಯದ ವೇಳೆ ಪದವಿ ಕಾಲೇಜುಗಳಿಗೆ 310 ಪ್ರಾಂಶುಪಾಲರ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ವಿಶೇಷ ವರ್ಗಾವಣೆ, ಕಲ್ಯಾಣ ಕರ್ನಾಟಕ ಮೀಸಲಾತಿ ಸೇರಿ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾಗಿದ್ದ ಸಮಸ್ಯೆ ಇತ್ಯರ್ಥಪಡಿಸಿ ನೇಮಕಾತಿ ಆದೇಶ ನೀಡಲಾಗಿದೆ ಎಂದರು.