ಮೈಸೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿನ ಮಹಾ ಕುಂಭಮೇಳದ ಬೆನ್ನಲ್ಲೇ ಕರ್ನಾಟಕದಲ್ಲೂ ಸೋಮವಾರದಿಂದ ಕುಂಭಮೇಳ ನಡೆಯಲಿದೆ. ಭಕ್ತರಿಗೆ ಪುಣ್ಯ ಸ್ನಾನ ಮಾಡಲು 5 ಕಡೆ ಸ್ಥಳ ಗುರುತು ಮಾಡಲಾಗಿದೆ.
ಮೈಸೂರು ಜಿಲ್ಲಾಡಳಿತ ಹಾಗೂ ಕುಂಭಮೇಳ ಆಚರಣಾ ಸಮಿತಿ ಸಹಯೋಗದೊಂದಿಗೆ 13ನೇ ಕುಂಭಮೇಳವನ್ನು ಫೆ.10, 11 ಮತ್ತು 12 ರಂದು ಜಿಲ್ಲೆಯ ಟಿ. ನರಸೀಪುರದ ಶ್ರೀ ಕ್ಷೇತ್ರ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಆಯೋಜಿಸಲಾಗಿದೆ.
ಫೆ.10ರ ಬೆಳಗ್ಗೆ 8.30ಕ್ಕೆ ಶ್ರೀ ಅಗಸ್‌ತ್ಯೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅನುಜ್ಞಾ ಕಾರ್ಯಕ್ರಮ, ಅಂಕುರಾರ್ಪಣೆ ಮತ್ತು ಧ್ವಜಾರೋಹಣ ನೆರವೇರಲಿದೆ. ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ .ಸಿ.ಮಹದೇವಪ್ಪ ಧ್ವಜಾರೋಹಣನೆರವೇರಿಸಿ, ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಫೆ.11ರಬೆಳಗ್ಗೆ 11ಕ್ಕೆಧಾರ್ಮಿಕಸಭೆಯನ್ನು ಏರ್ಪಡಿಸಲಾಗಿದ್ದು, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಉದ್ಘಾಟಿಸುವರು. ಸಚಿವರಾದ ಮಹದೇವಪ್ಪ, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ಡಾ.ಎಂ.ಸಿ.ಸುಧಾಕರ್ ಭಾಗವಹಿಸುವರು.
ಫೆ.12ರ ಮಧ್ಯಾಹ್ನ 12ಕ್ಕೆ ಧರ್ಮಸಭೆಯನ್ನು ಏರ್ಪಡಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಸಮಾರೋಪ ಭಾಷಣ ಮಾಡುವರು.