ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ 500 ಕೋಟಿ ಲೂಟಿಯಾಗಿದ್ದು, ಕಾಂಗ್ರೆಸ್ ಸರ್ಕಾರದ ಲಂಚಾವತಾರದ ಮತ್ತೂಂದು ಕರಾಳ ಅಧ್ಯಾಯ ಬಹಿರಂಗಗೊಂಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮದ್ಯ ಮಾರಾಟಗಾರರ ಸಂಘ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಅಬಕಾರಿ ಸಚಿವರು ಮಂಥ್ಲಿ ಮನಿ ಹೆಸರಿನಲ್ಲಿ ಮದ್ಯದ ಅಂಗಡಿಗಳಿಂದ ಪ್ರತಿ ತಿಂಗಳಿಗೆ 15 ಕೋಟಿ ರೂಪಾಯಿಯಂತೆ ವರ್ಷಕ್ಕೆ 180 ಕೋಟಿ ರೂ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವರ್ಗಾವಣೆ ದಂಧೆ, ಲೈಸೆನ್ಸ್ ಮಂಜೂರಾತಿ, ಮದ್ಯದ ಅಂಗಡಿಗಳಿಂದ ಮಂಥ್ಲಿ ಮನಿ ಸೇರಿದಂತೆ ಅಬಕಾರಿ ಸಚಿವರು ವರ್ಷಕ್ಕೆ ಸುಮಾರು 500 ಕೋಟಿ ರೂಪಾಯಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘ ಮಾಡಿರುವ ಆರೋಪ ಅತ್ಯಂತ ಗಂಭೀರವಾಗಿದ್ದು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಿ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಹೀಗಾಗಿ ಸ್ವಚ್ಚ ಅಬಕಾರಿ ಅಭಿಯಾನ ಘೋಷಣೆ ಅಡಿ ಹೋರಾಟ ಮಾಡಲು ಮದ್ಯದಂಗಡಿ ಮಾಲೀಕರ ಮುಷ್ಕರ ನಡೆಸಲು ಸಿದ್ದತೆ ನಡೆಸಿದ್ದು, ಇದೆ ನವೆಂಬರ್ 20 ರಂದು ರಾಜ್ಯವ್ಯಾಪ್ತಿ ಮದ್ಯ ಮಾರಾಟ ಸ್ಥಗಿತಗೊಳಿಸಿ ಮದ್ಯದಂಗಡಿ ಮಾಲೀಕರು ಪ್ರತಿಭಟನೆ ನಡೆಸಲಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಲ್ಲದೆ ರಾಜ್ಯ ಅಬಕಾರಿ ಇಲಾಖೆಯಲ್ಲಿ ವಿಪರೀತ ಭ್ರಷ್ಟಾಚಾರದಿಂದ ಮದ್ಯದ ಅಂಗಡಿ ಮಾಲೀಕರು ಬೇಸತ್ತು ಹೋಗಿದ್ದು, ಹಾಗಾಗಿ ರಾಜ್ಯದಲ್ಲಿ ನವೆಂಬರ್ 20 ರಂದು ಒಂದು ದಿನ ಮದ್ಯದಂಗಡಿ ಬಂದ್ ಆಗಲಿದೆ. ಇದರಿಂದ ಮದ್ಯಪ್ರಿಯರಿಗೆ ಅವತ್ತಿನ ಒಂದು ದಿನ ಮಧ್ಯ ಸಿಗುವುದು ಬಹುತೇಕ ಡೌಟ್ ಎಂದು ಹೇಳಲಾಗುತ್ತಿದೆ.