ಬೆಳಗಾವಿ : ರಾಜ್ಯದಲ್ಲಿ ಕೇಂದ್ರ ಸರ್ಕಾರದ ಮಾನದಂಡಗಳ ಆಧಾರದ ಮೇಲೆ ಸುಮಾರು 13 ಲಕ್ಷ ಕಾರ್ಡುಗಳು ಅನರ್ಹವಾಗಿವೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷರೊಂದಿಗೆ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಪಡಿತರ ಫಲಾನುಭವಿಗಳು ಕಡ್ಡಾಯವಾಗಿ ತಮ್ಮ ಕಾರ್ಡನ್ನು ಇ-ಕೆವೈಸಿ ಮಾಡಿಸಬೇಕು. ಅರ್ಹರು ಒಂದು ವೇಳೆ ಪರಿಷ್ಕರಣೆ ವೇಳೆ ಎಪಿಎಲ್ಗೆ ಬದಲಾಗಿದ್ದಲ್ಲಿ, ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರ ಕಚೇರಿಗೆ ಭೇಟಿ ಮಾಡಿ ಮನವಿ ಸಲ್ಲಿಸಬೇಕು. ಅದನ್ನು ಪರಿಶೀಲನೆ ಮಾಡಿ ಪುನಃ ಬಿಪಿಎಲ್ಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
3 ಲಕ್ಷದ 96 ಸಾವಿರ ಪಡಿತರ ಕಾರ್ಡುಗಳನ್ನು ಒಂದು ತಿಂಗಳೊಳಗೆ ಪರಿಷ್ಕರಣೆ ಮಾಡಿ, ನೂತನ ಕಾರ್ಡ್ ನೀಡಲು ಕ್ರಮ ವಹಿಸಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈ ವರ್ಷ ಪ್ರತಿ ಕ್ವಿಂಟಲ್ ರಾಗಿಗೆ 4,886 ರೂ. ಬೆಲೆಯಂತೆ ಖರೀದಿಸಲಾಗುತ್ತಿದೆ. ಈಗಾಗಲೇ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇದರಿಂದ ಒಟ್ಟು 3,000 ರೂ.ಕೋಟಿಗಳೊಂದಿಗೆ 2.57 ಲಕ್ಷ ರೈತರಿಗೆ ಈ ಯೋಜನೆಯು ಪ್ರಯೋಜನ ವಾಗಲಿದೆ ಎಂದು ಹೇಳಿದ್ದಾರೆ.








