ಬೆಂಗಳೂರು: ನಗರದಲ್ಲಿ ಉತ್ತಮ ಸಾರಿಗೆ ವ್ಯವಸ್ಥೆ ಒದಗಿಸುತ್ತಿರುವಂತ ಸಾರಿಗೆ ಸಂಸ್ಥೆಯಲ್ಲಿ ಬಿಎಂಟಿಸಿಯೂ ಒಂದಾಗಿದೆ. ಇಲ್ಲಿನ ನೌಕರರಿಗೆ ಮಾತ್ರ ಸರಿಯಾದ ರಜೆಯೂ ಇಲ್ಲ, ಓಟಿ ಮಾಡಿದ್ರೆ ಮಾಡಿದ ಕೆಲಸಕ್ಕೆ ಸಂಬಳವೂ ಇಲ್ಲದಂತೆ ಆಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸರ್ಕಾರಿ ನಿಯಮಗಳನ್ನೇ ಗಾಳಿಗೆ ತೂರಲಾಗಿದೆ. ಕಾರ್ಮಿಕ ನೀತಿಗೆ ಡೋಂಟ್ ಕೇರ್ ಎನ್ನುವಂತೆ ಹಿಟ್ಲರ್ ಆಡಳಿತದಂತೆ ವರ್ತಿಸುತ್ತಿರೋ ಆರೋಪ ಕೇಳಿ ಬಂದಿದೆ.
ಸಾರ್ವತ್ರಿಕ ರಜೆಯಿಲ್ಲ
ರಾಜ್ಯ ಸರ್ಕಾರದಿಂದ ಸಾರ್ವತ್ರಿಕ ರಜಾವಾಗಿ 21 ದಿನ ನೀಡಿದ್ರೂ, ಬಿಎಂಟಿಸಿಯಲ್ಲಿ ಮಾತ್ರ ನೌಕರರಿಗೆ ಈ ರಜೆಗಳು ಅನ್ವಯವಾಗುತ್ತಿಲ್ವಂತೆ. ನೌಕರರು ನಮಗೆ ವರ್ಷದಲ್ಲಿ ಸರ್ಕಾರ ಘೋಷಣೆ ಮಾಡೋ ಸಾರ್ವತ್ರಿಕ ರಜಾ ದಿನಗಳನ್ನು ಕೊಡ್ರಿ ಅಂದ್ರೆ, ನಿಮಗೆ ಅನ್ವಯವಾಗೋದಿಲ್ಲ. ನಾವು ಕೊಡೋ ರಜೆಯನ್ನು ತಗೊಳ್ಳಬೇಕು ಅನ್ನೋ ಧೋರಣೆ ತೋರುತ್ತಿರೋದಾಗಿ ತಿಳಿದು ಬಂದಿದೆ.
ಬಿಎಂಟಿಸಿಯಲ್ಲಿ ಸಾರ್ವತ್ರಿಕ ರಜಾ ದಿನಗಳನ್ನು ಬಿಟ್ಟು ನಿಗಮದಿಂದಲೇ ತಮಗೆ ಇಷ್ಟ ಬಂದ ಐದು ದಿನಗಳ ಸಾರ್ವತ್ರಿಕ ರಜಾ ದಿನಗಳನ್ನು ಮಾತ್ರವೇ ನೌಕರರಿಗೆ ನೀಡುತ್ತಿರೋದಾಗಿ ಹೇಳಲಾಗುತ್ತಿದೆ. ಹಿಂದೂಗಳಿಗೆ ಮುಸ್ಲೀಂ ರಜೆ, ಮುಸ್ಲೀಂ ಸಮುದಾಯದ ನೌಕರರಿಗೆ ಹಿಂದೂಗಳ ರಜೆಯನ್ನು ನೀಡುತ್ತಿರೋ ಆರೋಪ ಕೇಳಿ ಬಂದಿದೆ.
ಒಂದು ದಿನ ರಜೆ ಹಾಕಿದ್ರೆ 2 ದಿನ ವೇತನ ಕಟ್
ಇನ್ನೂ ಒಂದು ದಿನ ನೌಕರರು ರಜೆಯನ್ನು ಹಾಕಿದ್ರೆ ಬಿಎಂಟಿಸಿಯಿಂದ 2 ದಿನದ ವೇತನ ಕಟ್ ಮಾಡುತ್ತಿರೋದಾಗಿ ನೌಕರರು ಆರೋಪಿಸಿದ್ದಾರೆ. ಹೀಗೆ ಮಾಡಿದ್ರೆ ಕೆಲಸ ಮಾಡೋದು ಹೇಗೆ ಅಂತ ಬಿಎಂಟಿಸಿ ಸಾವಿರಾರೂ ನೌಕರರು ಅಳನ್ನು ನೌಕರರು ತೋಡಿಕೊಳ್ಳುತ್ತಿದ್ದಾರೆ.
8 ಗಂಟೆ ಓಟಿ ಮಾಡಿದ್ರೂ 4 ಗಂಟೆ ಓಟಿ ಹಣ ಮಾತ್ರ ಜಮಾ
ಬೆಂಗಳೂರು ನಗರದಲ್ಲಿ ಬಿಎಂಟಿಸಿ ನೌಕರರು ಒತ್ತಡದಲ್ಲಿ ಕೆಲಸ ಮಾಡ್ತಾ ಇದ್ದಾರೆ ಅನ್ನೋದಕ್ಕೆ ಈಗಾಗಲೇ ಅನೇಕ ಘಟನೆಗಳು ಸಾಕ್ಷಿಯಾಗಿದ್ವು. ಕಿಲ್ಲರ್ ಬಿಎಂಟಿಸಿ ಎಂಬ ಕುಖ್ಯಾತಿಗೂ ಕಾರಣವಾಗಿದೆ. ಇದಕ್ಕೆ ಕಾರಣ ಎನ್ನುವಂತೆ ಬಿಎಂಟಿಸಿಯಲ್ಲಿ ಓಟಿ ಮಾಡಿಸಿಕೊಳ್ಳುತ್ತಿರೋ ವ್ಯವಸ್ಥೆಯಾಗಿದೆ.
ಬಿಎಂಟಿಸಿಯ ನೌಕರರು ಒಂದು ಶಿಫ್ಟ್ ಮುಗಿಸಿ, ಮತ್ತೊಂದು ಶಿಫ್ಟ್ ಓಟಿಯಾಗಿ ಕೆಲಸ ಮಾಡಿದ್ರೆ ಮಾಡೋದು 8 ಗಂಟೆ ಓಟಿಯಾದ್ರೂ, ನೌಕರರಿಗೆ ಸಂಪೂರ್ಣ ಓಟಿ ಹಣವನ್ನು ನೀಡದೇ, 4 ಗಂಟೆಗೆ ಓಟಿಯ ಹಣವನ್ನು ಮಾತ್ರವೇ ನೀಡುತ್ತಿರೋದಾಗಿ ಆರೋಪ ಕೇಳಿ ಬಂದಿದೆ.
ಅಂದಹಾಗೇ ಕಾರ್ಮಿಕ ನಿಯಮದ ಪ್ರಕಾರ ಓಟಿಯನ್ನು ಇಂತಿಷ್ಟು ಸಮಯದವರೆಗೆ ಮಾತ್ರವೇ ಮಾಡಬೇಕು ಎಂಬುದು ನಿಯಮವಿದೆ. ಆದ್ರೇ ಇದನ್ನು ಮೀರಿ 8 ಗಂಟೆಯ ಓಟಿ ಮಾಡಿಸಿಕೊಳ್ಳುತ್ತಿರೋದು ಆಘಾತಕಾರಿ ಸಂಗತಿ. ಜೊತೆಗೆ ಇದೇ ಬಿಎಂಟಿಸಿ ಬಸ್ ಗಳ ಅಪಘಾತಕ್ಕೂ ಕಾರಣವಾಗುತ್ತಿದ್ಯಾ ಅನ್ನೋ ಪ್ರಶ್ನೆ ಮೂಡಿದೆ.
ಈ ಬಗ್ಗೆ ಸಾರಿಗೆ ಸಚಿವರು ಗಮನಹರಿಸಿ, ಸಮಸ್ಯೆ ಬಗೆ ಹರಿಸ್ತಾರಾ?
ಇದಷ್ಟೇ ಅಲ್ಲದೇ ತುರ್ತು ಸಂದರ್ಭದಲ್ಲಿ ನೌಕರರಿಗೆ ರಜೆ ಸಿಗೋದಂತೂ ಕನಸಿನ ಮಾತಾಗಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಎಂಟಿಸಿ ಎಂ.ಡಿ ಸೇರಿದಂತೆ ವಿವಿಧ ಮಟ್ಟದ ಅಧಿಕಾರಿಗಳು ಗಮನ ಹರಿಸಿ, ಬಗೆ ಹರಿಸ್ತಾರಾ ಎಂಬುದನ್ನು ಕಾದು ನೋಡಬೇಕಿದೆ.