ಬೀದರ್ : ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿರುವ ಬೀದರ್ -ಬೆಂಗಳೂರು ನಾಗರಿಕ ವಿಮಾನಯಾನ ಸೇವೆ ಇದೇ 15ರಿಂದ ಪುನಾರಂಭಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಮಾನಯಾನಕ್ಕೆ 16ರಂದು ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಬೀದರ್ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಇದು 2025ನೇ ಇಸವಿಯಾಗಿದ್ದು, ಈ ವರ್ಷ ಜಿಲ್ಲೆಯಲ್ಲಿ 2025 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆಯನ್ನು ಮುಖ್ಯಮಂತ್ರಿಯವರು ನೆರವೇರಿಸುವರು. ಇದರಲ್ಲಿ ಪ್ರಜಾಸೌಧ (ಜಿಲ್ಲಾಡಳಿತ ಕಚೇರಿ), ಭಾಲ್ಕಿ ಕ್ರೀಡಾಂಗಣ, ಆಸ್ಪತ್ರೆ, ಹೊನ್ನಿಕೇರಿ ಪರಿಸರ ಪ್ರವಾಸೋದ್ಯಮ ಸೇರಿದೆ ಎಂದರು.
ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ಕಾಮಗಾರಿ ಪ್ರಗತಿಯಲ್ಲಿದ್ದು, ಇದು ಪೂರ್ಣಗೊಂಡ ಬಳಿಕ ಬೀದರ್ ಜಿಲ್ಲೆ ಧಾರ್ಮಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕತೆಯ ತಾಣವಾಗಿ ಪರಿವರ್ತನೆಯಾಗಲಿದೆ. ಇದಕ್ಕೆ ಹೊನ್ನಿಕೇರಿಯ ಪರಿಸರ ಪ್ರವಾಸೋದ್ಯಮವೂ ಒತ್ತು ನೀಡಲಿದ್ದು, ನಾಗರಿಕ ವಿಮಾನಯಾನ ಸೇವೆಗೆ ಬೇಡಿಕೆ ಬರಲಿದೆ ಎಂದರು.
16ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಹಲವು ಸಚಿವರನ್ನು ಆಹ್ವಾನಿಸಲಾಗಿದ್ದು, ಹಲವು ಸಚಿವರು ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳುವರೆಂದರು.
ಬೆಲೆ ಏರಿಕೆಗೆ ಕೇಂದ್ರ ಬಿಜೆಪಿ ಹೊಣೆ
ಅಗತ್ಯ ಮತ್ತು ದಿನಬಳಕೆ ವಸ್ತುಗಳ ದರ ಏರಿಕೆಗೆ ಕೇಂದ್ರ ಬಿಜೆಪಿ ಸರ್ಕಾರವೇ ಹೊಣೆಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಬೀದರ್ ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಕಡಿಮೆ ಇದ್ದಾಗ್ಯೂ, ಕೇಂದ್ರ ಬಿಜೆಪಿ ಸರ್ಕಾರ ಡೀಸೆಲ್, ಪೆಟ್ರೋಲ್ ದರ ಹೆಚ್ಚಳ ಮಾಡಿದ್ದು ಇದರ ಪರಿಣಾಮವಾಗಿ ಎಲ್ಲ ಅಗತ್ಯವಸ್ತುಗಳ ದರದಲ್ಲಿ ಹೆಚ್ಚಳವಾಗಿದೆ. ಈಗ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಗಳ ದರವನ್ನೂ 50 ರೂ.ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದರು.
ಬಿಜೆಪಿ ಜನಾಕ್ರೋಶ ಯಾತ್ರೆಗೆ ಯಾವುದೇ ಅರ್ಥವಿಲ್ಲ. ಅವರಿಗೆ ಮಾಡಲು ಕೆಲಸವಿಲ್ಲ ಹೀಗಾಗಿ ಜನರಲ್ಲಿ ಗೊಂದಲ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಅವರು ಪ್ರತಿಭಟನೆ ಮಾಡುವುದಿದ್ದರೆ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ದರ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಮಾಡಲಿ, ನಾವೂ ಬೆಂಬಲ ಕೊಡುತ್ತೇವೆ ಎಂದರು.
ರಾಯರೆಡ್ಡಿ ಬಾಯಿತಪ್ಪಿ ಹೇಳಿಕೆ ಕೊಟ್ಟಿರಬೇಕು
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಅತಿರೇಕದ ಮಟ್ಟ ತಲುಪಿತ್ತು. ಬಹುಶಃ ಬಸವರಾಜ ರಾಯರೆಡ್ಡಿ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಭ್ರಷ್ಟಾಚಾರದಲ್ಲಿ ನಂ.1 ಆಗಿತ್ತು ಎಂದು ಹೇಳಲು ಹೋಗಿ ಬಾಯಿತಪ್ಪಿ ಈ ಹೇಳಿಕೆ ನೀಡಿರಬೇಕು ಎಂದರು.
ಗಣಿ ನವೀಕರಣ ಸುಳ್ಳು ಆರೋಪ
ಗಣಿ ಗುತ್ತಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಆರೋಪವನ್ನು ಬಿಜೆಪಿ ಮಾಡುತ್ತಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಮಿಗಿಲಾಗಿ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ರಾಜ್ಯಪಾಲರಿರುವ, ರಾಜಭವನ ನಿಷ್ಪಕ್ಷಪಾತವಾದ ಕೇಂದ್ರವಾಗಿರಬೇಕು. ಅದು ಬಿಜೆಪಿ ಕಚೇರಿ ಆಗಬಾರದು ಎಂದು ಈಶ್ವರ ಖಂಡ್ರೆ ಹೇಳಿದರು.
ಈ ನಿರ್ಣಯಗಳಿಗೆ ಅಹಮದಾಬಾದ್ ನಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಅಂಗೀಕಾರ
BREAKING: ದೆಹಲಿಯ ಐತಿಹಾಸಿಕ ಕೆಂಪು ಕೋಟೆ, ಜಾಮಾ ಮಸೀದಿಗೆ ಬಾಂಬ್ ಬೆದರಿಕೆ