ಪಣಜಿ: ದೆಹಲಿಯಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ಅಕಾಸಾ ಏರ್ (Akasa Air) ವಿಮಾನದ ಶೌಚಾಲಯದಲ್ಲಿ ಬೀಡಿ ಸೇದಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾಷ್ಟ್ರ ರಾಜಧಾನಿಯಿಂದ ಹೊರಟಿದ್ದ QP1625 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ಅಧಿಕಾರಿಗಳು ಪ್ರಕರಣದ ವಿವರಗಳನ್ನು ಹಂಚಿಕೊಂಡಿದ್ದಾರೆ.
ನಡೆದಿದ್ದೇನು?
ದೆಹಲಿ ನಿವಾಸಿ ಆಶಿಶ್ ಎಂಬಾತ ವಿಮಾನವು ಹಾರಾಟ ನಡೆಸುತ್ತಿದ್ದಾಗ ಶೌಚಾಲಯಕ್ಕೆ ತೆರಳಿ ಬೀಡಿ ಹಚ್ಚಿದ್ದಾನೆ. ವಿಮಾನದ ಒಳಗೆ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದರೂ, ಈತ ನಿಯಮ ಉಲ್ಲಂಘಿಸಿ ಈ ಕೃತ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೆ, ವಿಮಾನದ ಒಳಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುವ ‘ಲೈಟರ್’ (Lighter) ಕೂಡ ಈತನ ಬಳಿ ಪತ್ತೆಯಾಗಿದೆ ಎಂದು ಅಕಾಸಾ ಏರ್ ಸಂಸ್ಥೆ ದೂರು ನೀಡಿದೆ.
ಭದ್ರತಾ ನಿಯಮಗಳ ಉಲ್ಲಂಘನೆ:
ವಿಮಾನದ ಒಳಗೆ ಬೆಂಕಿ ಪೊಟ್ಟಣ ಅಥವಾ ಲೈಟರ್‌ಗಳಂತಹ ವಸ್ತುಗಳನ್ನು ಕೊಂಡೊಯ್ಯುವುದು ಪ್ರಯಾಣಿಕರ ಮತ್ತು ಸಿಬ್ಬಂದಿಯ ಸುರಕ್ಷತೆಗೆ ದೊಡ್ಡ ಸಂಚಕಾರ ತಂದೊಡ್ಡಬಹುದು. ಈ ಹಿನ್ನೆಲೆಯಲ್ಲಿ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಕ್ರಮ:
ವಿಮಾನ ಗೋವಾದ ಮೋಪಾ (Mopa) ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ, ವಿಮಾನಯಾನ ಸಂಸ್ಥೆಯು ಪೊಲೀಸರಿಗೆ ದೂರು ನೀಡಿದೆ. ಆರೋಪಿ ಆಶಿಶ್ ವಿರುದ್ಧ ಮೋಪಾ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ನಾಗರಿಕ ವಿಮಾನಯಾನ ಸುರಕ್ಷತೆ ವಿರುದ್ಧದ ಕಾನೂನುಬಾಹಿರ ಕೃತ್ಯಗಳ ದಮನ ಕಾಯ್ದೆಯ (Suppression of Unlawful Acts against Safety of Civil Aviation Act) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಅಕಾಸಾ ಏರ್ ಹೇಳಿಕೆ:
ಘಟನೆಯನ್ನು ಖಚಿತಪಡಿಸಿರುವ ಅಕಾಸಾ ಏರ್ ಸಂಸ್ಥೆ, “ಮಾರ್ಚ್ 7ರಂದು ದೆಹಲಿ-ಗೋವಾ ವಿಮಾನದ ಶೌಚಾಲಯದಲ್ಲಿ ಪ್ರಯಾಣಿಕನೊಬ್ಬ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ. ಕೂಡಲೇ ನಮ್ಮ ಕ್ಯಾಬಿನ್ ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ವಿಮಾನ ಇಳಿದ ತಕ್ಷಣ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ,” ಎಂದು ತಿಳಿಸಿದೆ.
ನಿಮ್ಮ ಗಮನಕ್ಕೆ: ವಿಮಾನ ಪ್ರಯಾಣದ ಸಮಯದಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವುದು ಗಂಭೀರ ಅಪರಾಧವಾಗಿದ್ದು, ಇದು ದಂಡದ ಜೊತೆಗೆ ಜೈಲು ಶಿಕ್ಷೆಗೂ ದಾರಿ ಮಾಡಿಕೊಡಬಹುದು. ಸೋ ವಿಮಾನಯಾನದ ಸಂದರ್ಭದಲ್ಲಿ ಎಚ್ಚರಿಕೆಯನ್ನು ವಹಿಸೋದು ಮರೆಯಬೇಡಿ.
ಕೃಷಿ ಕಲ್ಪ ಪ್ರತಿಷ್ಠಾನದ ಜೊತೆಗಿನ ತಿಳಿವಳಿಕೆ ಪತ್ರಕ್ಕೆ ರಾಜ್ಯ ಸರ್ಕಾರ ಅಂಕಿತ: ಸಚಿವ ಪ್ರಿಯಾಂಕ್ ಖರ್ಗೆ








