ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ಸುಡುತ್ತಿದ್ದ ವ್ಯಕ್ತಿಗೆ 10 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್ ರವರು ತಿಳಿಸಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ನವೆಂಬರ್ 11 ರಂದು ರಾತ್ರಿ ಪರಿಶೀಲನೆ ನಡೆಸುವ ವೇಳೆ, ಥಣಿಸಂದ್ರ ಮುಖ್ಯ ರಸ್ತೆ ಅಶ್ವತ್ಥನಗರದಲ್ಲಿ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಸುಡುತ್ತಿರುವುದನ್ನು ಗಮನಿಸಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಪ್ಲಾಸ್ಟಿಕ್ ಗೆ ಬೆಂಕಿ ಹಚ್ಚಿ ಸುಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದಾಗ, ಅವರು ಪ್ಲಾಸ್ಟಿಕ್/ತ್ಯಾಜ್ಯವನ್ನು ಸುಡುತ್ತಿರುವುದನ್ನು ಒಪ್ಪಿಕೊಂಡು ನೀರು ಹಾಕಿ ನಂದಿಸಿದರು. ಈ ರೀತಿಯಾಗಿ ತ್ಯಾಜ್ಯ ಸುಡುವುದು ಕಾನೂನುಬಾಹಿರವಾಗಿರುವುದರಿಂದ, ಪ್ಲಾಸ್ಟಿಕ್ ಸುಟ್ಟ ವ್ಯಕ್ತಿಗೆ ದಂಡ ವಿಧಿಸಲು ಉತ್ತರ ನಗರ ಪಾಲಿಕೆ ಜಂಟಿ ಆಯುಕ್ತರಿಗೆ ಮುಖ್ಯ ಆಯುಕ್ತರು ನಿರ್ದೇಶನ ನೀಡಿದರು.
ಅದನ್ವಯವಾಗಿ, ಥಣಿಸಂದ್ರ ವಾರ್ಡ್‌ನ ಕಿರಿಯ ಆರೋಗ್ಯ ಪರಿವೀಕ್ಷಕ ಹಾಗೂ ಮಾರ್ಷಲ್‌ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಎಳನೀರು ಮಾರಾಟ ಮಾಡುವ ಇಝಾಜ್ ಖಾನ್ ರವರು ಪ್ಲಾಸ್ಟಿಕ್ ಸುಡುತ್ತಿರುವುದು ಖಚಿತವಾಗಿ ಕಂಡುಬಂದಿದ್ದು, ಸ್ಥಳದಲ್ಲೇ 10 ಸಾವಿರ ರೂ. ದಂಡ ವಿಧಿಸಲಾಯಿತು. ಜೊತೆಗೆ ಇನ್ನು ಮುಂದೆ ಈ ರೀತಿಯಾಗಿ ಸುಡದಂತೆ ಮತ್ತು ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ನೀಡಲಾಯಿತು.
ತ್ಯಾಜ್ಯ ಸುಡದಂತೆ ನಾಗರಿಕರಲ್ಲಿ ಮನವಿ:
ತ್ಯಾಜ್ಯ ಸುಡುವುದು ಕಾನೂನುಬಾಹಿರವಾಗಿದ್ದು, ಇದರಿಂದ ಮಾಲಿನ್ಯ ಹೆಚ್ಚುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಪ್ಲಾಸ್ಟಿಕ್/ಒಣ ತ್ಯಾಜ್ಯವನ್ನು ಸುಡದೆ, ಪಾಲಿಕೆಯಿಂದ ಬರುವ ಆಟೋ–ಟಿಪ್ಪರ್‌ಗಳಿಗೆ ಹಸ್ತಾಂತರಿಸಲು ನಾಗರಿಕರಿಗೆ ಮನವಿ ಮಾಡಲಾಗಿದೆ. ಸ್ವಚ್ಛ ಮತ್ತು ಸುರಕ್ಷಿತ ನಗರವನ್ನು ನಿರ್ಮಿಸುವುದು ನಮ್ಮ ಎಲ್ಲರ ಜವಾಬ್ದಾರಿಯಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ.
ನಿಮ್ಮ ಸ್ವಂತ ಮನೆ ಕೆಲಸ ನಿಂತು ಹೋಗಿದ್ಯಾ? ಭೂ ವರಾಹ ಸ್ವಾಮಿ ಹೀಗೆ ಪೂಜಿಸಿ, ಮತ್ತೆ ಆರಂಭ ಗ್ಯಾರಂಟಿ








