ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯಲ್ಲಿನ ಹೊಸ ವಿದ್ಯುತ್ ಸ್ಥಾಪನಗಳಲ್ಲಿ ಅಳವಡಿಸಲಾಗುತ್ತಿರುವ ಸ್ಮಾರ್ಟ್ ಮೀಟರ್ ದರ ವೈಜ್ಞಾನಿಕವಾಗಿದ್ದು, ಅದರ ಪೂರೈಕೆದಾರರ ಜತೆಗಿನ ಟೆಂಡರ್ ಪ್ರಕ್ರಿಯೆಯೂ ಪಾರದರ್ಶಕವಾಗಿ ನಡೆದಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್.ಶಿವಶಂಕರ್ ಹೇಳಿದ್ದಾರೆ.
ರಾಜ್ಯದ ವಿದ್ಯುತ್ ಪರಿಸ್ಥಿತಿ ಹಾಗೂ ವಿದ್ಯುತ್ ಪೂರೈಕೆಗೆ ಇಂಧನ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಲು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಅವರ ನೇತೃತ್ವದಲ್ಲಿ ಸೋಮವಾರ ಬೆಸ್ಕಾಂ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು 2024ರ ಮಾರ್ಚ್ 06 ರಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ, ಹಂತ ಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ಬದಲಾವಣೆ ಕಾರ್ಯ ಕೈಗೊಳ್ಳಲಾಗುವುದು. ಹಾಲಿ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಐಚ್ಛಿಕ. ಹೊಸ ಹಾಗೂ ತಾತ್ಕಾಲಿಕ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕಾಗುತ್ತದೆ,” ಎಂದಿದ್ದಾರೆ.
“ನೈಜ ಸಮಯದ ವಿದ್ಯುತ್ ಬಳಕೆ ಮಾಹಿತಿ ಜತೆಗೆ ವಿದ್ಯುತ್ ಬಿಲ್ ಪಾವತಿಗೆ ಡಿಜಿಟಲ್ ಸ್ಪರ್ಶ ನೀಡಲು ಮುಂದಾಗಿರುವ ಇಂಧನ ಇಲಾಖೆಯು ಸ್ಮಾರ್ಟ್ ಮೀಟರ್ ಯೋಜನೆ ಜಾರಿಗೊಳಿಸಿದೆ. ಮೀಟರ್ ಹಾಗೂ ಬಿಲ್ ಲೋಪದೋಷಗಳನ್ನು ಸರಿಪಡಿಸಲು ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುತ್ತಿದೆ. ಟಿಓಡಿ (Time of the day) ಸೌಲಭ್ಯ, ರಿಮೋಟ್ ರೀಡಿಂಗ್, ಆಟೋ ಕನೆಕ್ಷನ್ ಮತ್ತು ಆಟೋ ಡಿಸ್‌ಕನೆಕ್ಷನ್ ಇದರಿಂದ ಸಾಧ್ಯವಾಗಲಿದೆ. ವಿದ್ಯುತ್ ಕಡಿತವಾದಾಗ ವಿದ್ಯುತ್ ವಿತರಣಾ ಕಂಪನಿಗೆ ಕ್ಷಿಪ್ರ ಮಾಹಿತಿ ತಲುಪಿ, ವಿದ್ಯುತ್ ಮರು ಸ್ಥಾಪನೆ ಪ್ರಕ್ರಿಯೆ ಸುಲಭ ಮತ್ತು ತ್ವರಿತಗೊಳ್ಳುವುದು,” ಎಂದು ಅವರು ಹೇಳಿದರು.
“ಬಹುತೇಕ ರಾಜ್ಯಗಳು ಆರ್‌ಡಿಎಸ್‌ಎಸ್ ಅಳವಡಿಸಿಕೊಂಡಿದ್ದು, ಅದರ ಮಾರ್ಗಸೂಚಿಯನ್ವಯ ಆ ರಾಜ್ಯಗಳು, ಸ್ಮಾರ್ಟ್ ಮೀಟರ್ ಮತ್ತು ಸಾಫ್ಟ್ ವೇರ್ ವೆಚ್ಚವೂ ಸೇರಿಸಿ ಟೆಂಡರ್ ಕರೆದಿದ್ದವು. ಆ ರಾಜ್ಯಗಳಲ್ಲಿ ವಿದ್ಯುತ್ ಸರಬರಾಜು ಕಂಪನಿಗಳೇ ಸ್ಮಾರ್ಟ್ ಮೀಟರ್ ಖರೀದಿಸಿ ಗ್ರಾಹಕರಿಗೆ ಅಳವಡಿಸಿದ ಬಳಿಕ, ಸ್ಮಾರ್ಟ್ ಮೀಟರ್ ವೆಚ್ಚ ಹಾಗೂ ಅದರ ತಾಂತ್ರಿಕ ನಿರ್ವಹಣವಾ ವೆಚ್ವವನ್ನು ವಿದ್ಯುತ್ ದರಕ್ಕೆ ಹೊಂದಾಣಿಕೆ ಮಾಡಿ ವಸೂಲಿ ಮಾಡುತ್ತವೆ. ಉದಾಹರಣೆಗೆ, ಕೇಂದ್ರ ಸರ್ಕಾರದ ಸಬ್ಸಿಡಿ ಸೇರಿ 10 ವರ್ಷಗಳ ಕಾಲ ಪ್ರತಿ ಸ್ಮಾರ್ಟ್ ಮೀಟರ್‌ಗೆ ಪ್ರತಿ ತಿಂಗಳು ತಗಲುವ ವೆಚ್ಚ -ಮಹಾರಾಷ್ಟ್ರದಲ್ಲಿ 120.34 ರೂ., ಪಶ್ಚಿಮ ಬಂಗಾಳದಲ್ಲಿ 117.81 ರೂ., ಸಿಕ್ಕಿಂ ರಾಜ್ಯದಲ್ಲಿ 148.88 ರೂ., ಮಣಿಪುರದಲ್ಲಿ 130.30 ರೂ., ಮಧ್ಯಪ್ರದೇಶದಲ್ಲಿ 115.84 ರೂ. ಆಗುತ್ತದೆ. ಇದನ್ನು ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಬಿಲ್‌ಗೆ ಹೊಂದಾಣಿಕೆ ಮಾಡಿ ಗ್ರಾಹಕರಿಂದ ಪಡೆಯುತ್ತವೆ. ಅಲ್ಲದೇ, ಈ ರಾಜ್ಯಗಳಲ್ಲಿ ಏಕಕಾಲದಲ್ಲಿ (Bulk replacement) ಎಲ್ಲಾ ಗ್ರಾಹಕರ ಸ್ಥಾಪನಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಸುತ್ತಿವೆ,” ಎಂದು ವಿವರಿಸಿದರು.
ನಮ್ಮ ರಾಜ್ಯದ ಮಾದರಿಯನ್ನು ವಿವರಿಸಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, “ಕೆಇಆರ್‌ಸಿ ಮಾರ್ಗಸೂಚಿ ಅನ್ವಯ, ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ದರ (ಸಿಂಗಲ್ ಫೇಸ್ – 4,998 ರೂ.) ಗ್ರಾಹಕರೇ ಭರಿಸುತ್ತಿದ್ದಾರೆ. ಜತೆಗೆ, ಪ್ರತಿ ತಿಂಗಳ ತಾಂತ್ರಿಕ ನಿರ್ವಹಣಾ ವೆಚ್ಚ 75 ರೂ. ಮೊತ್ತವನ್ನು ಬೆಸ್ಕಾಂ ಭರಿಸಿ, ನಂತರ ನಿರ್ವಹಣಾ ವೆಚ್ಚದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಇತರೆ ರಾಜ್ಯಗಳ ದರದಂತೆ ಲೆಕ್ಕ ಹಾಕಿದರೆ, ಕರ್ನಾಟಕದಲ್ಲಿ ಈ ಮೊತ್ತ 116.65 ರೂ. (ಸ್ಮಾರ್ಟ್ ಮೀಟರ್ ಮತ್ತು ತಂತ್ರಜ್ಞಾನ ನಿರ್ವಹಣೆ ವೆಚ್ಚ ಜತೆಗೂಡಿದಲ್ಲಿ) ಆಗುತ್ತದೆ. ಹೀಗಾಗಿ ಇತರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ದರ ಹೆಚ್ಚಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು,”ಎಂದು ಸ್ಪಷ್ಟಪಡಿಸಿದರು.
“ರಾಜ್ಯದಲ್ಲಿ ಕೇವಲ ತಾತ್ಕಾಲಿಕ ಹಾಗೂ ಹೊಸ ಸ್ಥಾಪನಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸುವುದರಿಂದ ಈ ಸಂಖ್ಯೆಯೂ ಕಡಿಮೆ ಇದ್ದು, ರಾಜ್ಯದ ವಿವಿಧ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಸ್ಮಾರ್ಟ್ ಮೀಟರ್ ಅಳವಡಿಸಬೇಕಾಗುತ್ತದೆ. ಅಲ್ಲದೇ, ಈ ಕೆಲಸಕ್ಕಾಗಿ ನುರಿತ ಕೆಲಸಗಾರರನ್ನು ಬಿಡ್ಡುದಾರರರು 5 ವರ್ಷಗಳ ಕಾಲ ಇರಿಸಬೇಕಿರುತ್ತದೆ. ಇದರಿಂದಾಗಿ ಅವರು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು ಮತ್ತು ಕಡಿಮೆ ಮೀಟರ್‌ಗಳನ್ನು ಬದಲಾಯಿಸಲು ಅನೇಕ ಬಾರಿ ಓಡಾಡಬೇಕಾಗುತ್ತದೆ. ಹೀಗಾಗಿ ಸ್ಮಾರ್ಟ್‌ಮೀಟರ್ ದರ ಸಮಂಜಸವಾಗಿದೆ,”ಎಂದು ವಿವರಿಸಿದರು.
“2025ರ ಫೆಬ್ರವರಿ 15ರಿಂದ ನಗರ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಬೆಸ್ಕಾಂನಲ್ಲಿ ಸದ್ಯ, 30,600 ಸ್ಮಾರ್ಟ್ ಮೀಟರ್‌ಗಳ ದಾಸ್ತಾನು ಇದೆ,” ಎಂದು ತಿಳಿಸಿದರು.
ನಿಯಮಾನುಸಾರ ಟೆಂಡರ್ ಪ್ರಕ್ರಿಯೆ
“ಕೇಂದ್ರ ವಿದ್ಯುತ್ ಸಚಿವಾಲಯ ನಿಗದಿಪಡಿಸಿರುವ ಸಾಮಾನ್ಯ ಬಿಡ್ಡಿಂಗ್ ದಾಖಲೆ (Standard Bidding Document)ಗಳ ಪ್ರಕಾರ ಹಾಗೂ ಕೆಟಿಪಿಪಿ ಕಾಯ್ದೆ ಅನುಸಾರ 2024ರ ಸೆ. 26ರಂದು ಟೆಂಡರ್ ಕರೆಯಲಾಗಿತ್ತು. ಬೆಸ್ಕಾಂ ನಿರ್ದೇಶಕರ ಮಂಡಳಿಯ ಅನುಮೋದನೆ ಮೇರೆಗೆ, ಕಡಿಮೆ ದರ ಬಿಡ್ ಮಾಡಿದ್ದ ರಾಜಶ್ರೀ ಎಲೆಕ್ಟ್ರಿಕಲ್ಸ್ ಸಂಸ್ಥೆಗೆ 2024ರ ಡಿ.23ರಂದು ಗುತ್ತಿಗೆ ನೀಡಲಾಯಿತು,”ಎಂದು ವಿವರಿಸಿದರು.
ಸ್ಮಾರ್ಟ್ ಮೀಟರ್ ವೈಶಿಷ್ಟ್ಯ ಏನು?
ಹಳೆಯ ಮಾದರಿಯ ಮೀಟರ್‌ಗಳಿಗಿಂತ ವಿಶಿಷ್ಟವಾಗಿರುವ ಸ್ಮಾರ್ಟ್ ಮೀಟರ್‌ಗಳು ಜಿಪಿಆರ್‌ಎಸ್ ಆಧಾರಿತ ಸಂವಹನ ಡೇಟಾ ಸಂಗ್ರಹಣೆಗೆ ಸರ್ವರ್ ಹಾಗೂ ಕ್ಲೌಡ್ ಸಂಪರ್ಕ ಹೊಂದಿರುತ್ತದೆ. ಅಡ್ವಾನ್ಸ್‌ಡ್ ಮೀಟರಿಂಗ್ ಇನ್ಫ್ರಾಸ್ಟ್ರಕ್ಚರ್ (AMI) ತಂತ್ರಜ್ಞಾನದ ಸ್ಮಾರ್ಟ್ ಮೀಟರ್‌ಗಳು ವಿದ್ಯುತ್ ಬಳಕೆ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಗ್ರಾಹಕರು ಹಾಗೂ ಎಸ್ಕಾಂಗಳ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದ ವಿದ್ಯುತ್ ಬಳಕೆ, ವೊಲ್ಟೇಜ್, ಪವರ್ ಫ್ಯಾಕ್ಟರ್ ಮಾಹಿತಿ ಹಾಗೂ ರೀಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ. ಮುಂಚಿತವಾಗಿ ಹಣ ಪಾವತಿಸಿ ತಮ್ಮ ಆಯ್ಕೆಯ ದಿನಗಳ ಅವಧಿಗೆ ರಿಜಾರ್ಜ್ ಮಾಡಿಕೊಳ್ಳಬಹುದು. ಗ್ರಾಹಕರು ಮುಂಚಿತವಾಗಿ ಹಣ ಪಾವತಿಸಿ ವಿದ್ಯುತ್ ಬಳಸಬಹುದಾಗಿದೆ. ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ಗ್ರಾಹಕರು ಬಿಲ್ ಪಾವತಿಸಿದ ತಕ್ಷಣ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ.
ಏನಿದು ಆರ್‌ಡಿಎಸ್ಎಸ್?
ಕೇಂದ್ರ ಇಂಧನ ಪ್ರಾಧಿಕಾರದ ನಿರ್ದೇಶನದಂತೆ 2021-22 ನೇ ಸಾಲಿನಲ್ಲಿ ಕೇಂದ್ರದ ಇಂಧನ ಸಚಿವಾಲಯವು ಪರಿಷ್ಕೃತ ವಿತರಣಾ ವಲಯ ಯೋಜನೆ (RDSS- Revamped Distribution Sector Scheme) ರೂಪಿಸಿತ್ತು. ಈ ಯೋಜನೆ ಒಪ್ಪಿಕೊಂಡಿದ್ದರೆ, ಎಲೆಕ್ಟ್ರಿಕಲ್ ಮೂಲ ಸೌಕರ್ಯವನ್ನು ಒದಗಿಸಲು ಕೇಂದ್ರ ಸರ್ಕಾರ ಶೇ. 60ರಷ್ಟು ಅನುದಾನ ನೀಡುತ್ತಿತ್ತು. ಜತೆಗೆ, ಸ್ಮಾರ್ಟ್ ಮೀಟರ್‌ಗಳ ಬದಲಾವಣೆ ಮಾಡಲು ಒಟ್ಟು ವೆಚ್ಚದ ಶೇ.15ರಷ್ಟು ಅಥವಾ 900 ರೂ. ಕೇಂದ್ರ ಸರ್ಕಾರ ನೀಡುತ್ತಿತ್ತು. ಆದರೆ, ರಾಜ್ಯ ಸರ್ಕಾರಗಳು ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಾಕಿ ಇರುವ ಸಬ್ಸಿಡಿ, ಇತರೆ ಬಾಕಿಗಳನ್ನು ಪಾವತಿಸಿದರೆ ಮಾತ್ರ ಯೋಜನೆಯ ಅನುಕೂಲ ಪಡೆದುಕೊಳ್ಳಬಹುದು ಎಂದು ಹೇಳಿತ್ತು. ಅಲ್ಲದೆ, ಎಲ್ಲಾ ಗ್ರಾಹಕರೂ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಹೇಳಿತ್ತು. ಈ ಷರತ್ತುಗಳನ್ನು ಅಂದಿನ ಸರ್ಕಾರ ಒಪ್ಪದ ಕಾರಣ ರಾಜ್ಯವು ಕೇಂದ್ರದ ಆರ್ ಡಿಎಸ್ ಯೋಜನೆಯನ್ನು ಒಪ್ಪಿಕೊಂಡಿರಲಿಲ್ಲ. ಕೇಂದ್ರ ಸರ್ಕಾರದ ಆರ್ ಡಿಎಸ್ ಯೋಜನೆ ಒಪ್ಪಿಕೊಂಡಿದ್ದರೆ, ಹಾಲಿ ಗ್ರಾಹಕರು ಸೇರಿದಂತೆ ಎಲ್ಲರೂ ಸ್ಮಾರ್ಟ್ ಮೀಟರ್ ಅವಡಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇತ್ತು. ಆರ್ ಡಿಎಸ್ ಯೋಜನೆಯಡಿ ಸ್ಮಾರ್ಟ್ ಮೀಟರ್ ಮತ್ತು ಸಾಫ್ಟ್‌ವೇರ್ ಸೇರಿ ದರ ನಿಗದಿಪಡಿಸಲಾಗುತ್ತದೆ.
GOOD NEWS: ಮಾರ್ಚ್.31ರ ನಂತ್ರ ಎರಡು ಕಂತುಗಳಲ್ಲಿ ‘ಗೃಹಲಕ್ಷ್ಮೀ ಯೋಜನೆ’ ಹಣ ಬಿಡುಗಡೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
BREAKING : ನಾನು ಸೇರಿದಂತೆ ಎಲ್ಲಾ ವಿರೋಧ ಪಕ್ಷದ ನಾಯಕರ ‘ಫೋನ್ ಟ್ಯಾಪಿಂಗ್’ ಆಗ್ತಿದೆ : ಆರ್ ಅಶೋಕ್ ಸ್ಪೋಟಕ ಹೇಳಿಕೆ!