ಬೆಂಗಳೂರು : ಯಲಹಂಕ ಸಮೀಪ ಸ್ಥಾಪನೆಯಾಗಿರುವ ರಾಜ್ಯದಲ್ಲಿಯೇ ಪ್ರಪ್ರಥಮ ಅನಿಲ ಆಧಾರಿತ 370 ಮೆಗಾ ವಾಟ್ ಸಾಮರ್ಥ್ಯದ ‘ಯಲಹಂಕ ಸಂಯೋಜಿತ ಆವರ್ತ ವಿದ್ಯುತ್ ಸ್ಥಾವರ’ (ಸಿಸಿಪಿಪಿ) ಜುಲೈ ಎರಡನೇ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂಬುದಾಗಿ ಇಂಧನ ಸಚಿವ ಕೆ.ಜೆ ಜಾರ್ಜ್ ಮಾಹಿತಿ ಹಂಚಿಕೊಂಡಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ವತಿಯಿಂದ ಸ್ಥಾಪಿಸಲಾಗುತ್ತಿರುವ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಯೋಜನೆ ಕುರಿತಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಕು ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಘಟಕವನ್ನು ಉದ್ಘಾಟಿಸಲು ತೀರ್ಮಾನಿಸಲಾಗಿದೆ.
ಒಟ್ಟು 370.05 ಮೆಗಾ ವ್ಯಾಟ್ ಸಾಮರ್ಥ್ಯದ ಈ ಘಟಕದಲ್ಲಿ ಗ್ಯಾಸ್ ಟರ್ಬೈನ್ ಜನರೇಟರ್ ಔಟ್ ಪುಟ್ ಮೂಲಕ 236.825 ಮೆಗಾವ್ಯಾಟ್ ಮತ್ತು ಸ್ಟೀಮ್ ಟರ್ಬೈನ್ ಜನರೇಟರ್ ಔಟ್ ಪುಟ್ ಮೂಲಕ 133.225 ಮೆಗ್ಯಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈಗಾಗಲೇ ಸಂಯೋಜಿತ ಆವರ್ತದದಲ್ಲಿ ಪ್ರಾಯೋಗಿಕ ಉತ್ಪಾದನಾ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ.
ಸಭೆಯಲ್ಲಿ ಯೋಜನೆಯ ಕುರಿತು ವಿಸ್ತೃತ ಮಾಹಿತಿ ಪಡೆದ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು, “ಇದು ಸರ್ಕಾರ ಮತ್ತು ಕೆಪಿಸಿಎಲ್ ಪಾಲಿಗೆ ಮಹತ್ವದ ಯೋಜನೆಯಾಗಿದೆ. ಅದರಲ್ಲೂ ಸರಕಾರದ ಸಂಸ್ಥೆಯೊಂದು ರಾಜ್ಯದಲ್ಲೇ ಮೊದಲ ಬಾರಿ ಅನಿಲ ಆಧಾರಿತ ವಿದ್ಯುತ್ ಉತ್ಪಾದನೆ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಹೀಗಾಗಿ ತ್ವರಿತವಾಗಿ ಎಲ್ಲಾ ಸಿದ್ಧತಾ ಕಾರ್ಯಗಳನ್ನು ಪೂರ್ಣಗೊಳಿಸಿ ಜುಲೈ 2ನೇ ವಾರದಲ್ಲಿ ಉದ್ಘಾಟನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು”, ಎಂದು ಸೂಚಿಸಿದರು.
“2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಲಹಂಕ ಸಂಯುಕ್ತ ಆವರ್ತಕ ವಿದ್ಯುತ್ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಎಲ್ಲಾ ಕೆಲಸ ಮುಗಿದು ಅವರೇ ಅದನ್ನು ಉದ್ಘಾಟಿಸಲಿದ್ದಾರೆ. ನಮ್ಮ ಸರ್ಕಾರ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ”, ಎಂದು ಹೇಳಿದರು.
ಸಭೆಯಲ್ಲಿ ಇಂಧನ ಇಲಾಖೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಸಿಎಲ್ ನ ಹಣಕಾಸು ನಿರ್ದೇಶಕಆರ್.ನಾಗರಾಜ್, ತಾಂತ್ರಿಕ ನಿರ್ದೇಶಕ ಸಿ.ಎಂ.ದಿವಾಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜುಲೈ ಕೊನೇ ವಾರ ಬಿಡದಿ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ಕಾರ್ಯಾರಂಭ
ಇದೇ ವೇಳೆ ಬಿಡದಿಯಲ್ಲಿ ಸ್ಥಾಪಿಸಲಾಗುತ್ತಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಯೋಜನೆಯ ಪ್ರಗತಿ ಪರಿಶೀಲನೆಯನ್ನೂ ನಡೆಸಿದ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು, ಜುಲೈ ಕೊನೆಯ ವಾರದಲ್ಲಿ ಈ ವಿದ್ಯುತ್ ಉತ್ಪಾದನಾ ಘಟಕವನ್ನೂ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ 260 ಕೋಟಿ ರೂ. ವೆಚ್ಚದಲ್ಲಿ 600 ಟನ್ ತ್ಯಾಜ್ಯ ಸಂಸ್ಕರಿಸಿ 11.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದ್ದು, ಬಹುತೇಕ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದನೆ ಆರಂಭಗೊಳಿಸಿ ಜುಲೈ ಕೊನೇ ವಾರದಲ್ಲಿ ಉದ್ಘಾಟನೆಗೆ ಸಜ್ಜುಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
“ಈ ಘಟದಲ್ಲಿ ಒಣ ತ್ಯಾಜ್ಯ ಬಳಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ವಿದ್ಯುತ್ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಿದ ಬಳಿಕ ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ಸ್ವಲ್ಪ ಮಟ್ಟಿಗೆ ಬಗೆಹರಿಯುತ್ತದೆ”, ಎಂದು ಇದೇ ವೇಳೆ ಸಚಿವರು ಹೇಳಿದರು.
ಪ್ರಜ್ವಲ್ ಅಶ್ಲೀಲ ವಿಡಿಯೋ ಹಂಚಿದ್ದು ಯಾರೆಂಬುದು ಮಾಹಿತಿ ಇದೆ : ಜಿ.ಪರಮೇಶ್ವರ್ ಸ್ಪೋಟಕ ಹೇಳಿಕೆ