ಬೆಂಗಳೂರು: ಖಾಸಗಿ ಕಾಲೇಜೊಂದರಲ್ಲಿ ಬಿಬಿಎ ಏವಿಯೇಷನ್ ನ ಎರಡನೇ ವರ್ಷದ ವಿದ್ಯಾರ್ಥಿಯೊಬ್ಬನ ಮೇಲೆ ಹಿರಿಯರು ರ್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಗಡ್ಡ ಮತ್ತು ಮೀಸೆ ಬೋಳಿಸುವಂತೆ ಸೀನಿಯರ್ ಗಳ ಸೂಚನೆಗಳನ್ನು ಪಾಲಿಸದ ಕಾರಣ ವಿದ್ಯಾರ್ಥಿಯನ್ನು ರ್ಯಾಗ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹಲ್ಲೆಯಲ್ಲಿ 21 ವರ್ಷದ ವಿದ್ಯಾರ್ಥಿಯ ಕೈ ಮುರಿತ ಮತ್ತು ಹಣೆಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಸಂತ್ರಸ್ತ ಚಿಕ್ಕ ಬೆಳ್ಳಂದೂರಿನ ಕೃಪಾನಿಧಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ವಿದ್ಯಾರ್ಥಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತನ ಮೇಲೆ ಹಲ್ಲೆ ನಡೆಸಿದ ಮೂವರು ಹಿರಿಯರನ್ನು ಕ್ಸೇವಿಯರ್, ವಿಷ್ಣು ಮತ್ತು ಶರತ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ಮತ್ತು ಆರೋಪಿ ಎಲ್ಲರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 30 ರಂದು ಸುಮಾರು 10 ವಿದ್ಯಾರ್ಥಿಗಳ ಗುಂಪು ತನ್ನ ಮಗನ ಮೇಲೆ ಹಲ್ಲೆ ನಡೆಸಿದೆ ಎಂದು ಸಂತ್ರಸ್ತನ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಏಪ್ರಿಲ್ನಲ್ಲಿ ಕಾಲೇಜಿಗೆ ಕಾಲಿಟ್ಟಾಗ ಗಡ್ಡ ಮತ್ತು ಮೀಸೆ ಹೊಂದಿರುವುದಕ್ಕೆ ಮೂವರು ಹಿರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಸಂತ್ರಸ್ತ ಹೇಳಿದ್ದಾರೆ. ಸೀನಿಯರ್ ಗಳು ಶೇವ್ ಮಾಡಲು ಮತ್ತು ಮರುದಿನ ಬರಲು ಹೇಳಿದ್ದರು ಎಂದು ಸಂತ್ರಸ್ತ ಹೇಳಿದ್ದಾರೆ. ಆದಾಗ್ಯೂ, ಅವರು ತಮ್ಮ ಸೂಚನೆಗಳನ್ನು ಅನುಸರಿಸದ ಕಾರಣ ಹಿರಿಯರು ಅವರನ್ನು ರ್ಯಾಗಿಂಗ್ ಮಾಡಲು ಪ್ರಾರಂಭಿಸಿದರು.