ಬೆಂಗಳೂರು: ನಾಗಮಂಗಲ ಗಲಭೆಯ ನಂತ್ರ ಪೊಲೀಸ್ ಇಲಾಖೆ ಬೆಂಗಳೂರಲ್ಲಿ ಅಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಿದೆ. ಈ ಹಿನ್ನಲೆಯಲ್ಲೇ ಬೆಂಗಳೂರಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವಜನಿಕರು ಅನುಸರಿಸಬೇಕಾದಂತ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ದಿನಾಂಕ:16/09/2024 ರಂದು ಬೆಂಗಳೂರು ನಗರಾದ್ಯಂತ ಮುಸ್ಲಿಮರು ಈದ್‌ಮಿಲಾದ್ ಹಬ್ಬವನ್ನು ಆಚರಿಸುವ ಪ್ರಯುಕ್ತ, ಮಸೀದಿಗಳಲ್ಲಿ ಪ್ರಾರ್ಥನೆ ಮುಗಿಸಿ ನಂತರ, ಮೆರವಣಿಗೆಯಲ್ಲಿ ಸ್ಥಬ್ಧ ಚಿತ್ರಗಳು, ಧ್ವನಿವರ್ಧಕಗಳನ್ನು ಉಪಯೋಗಿಸಿಕೊಂಡು, ನಡಿಗೆಯಲ್ಲಿ ವೈ.ಎಂ.ಸಿ.ಎ. ಮೈದಾನ, ಮಿಲ್ಲರ್‌ರಸ್ತೆ ಖುದ್ದು ಸಾಬ್ ಇದ್ದಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀನಗರದ ಸುಲ್ತಾನ್‌ಜೀ ಗುಂಟಾ ಮೈದಾನಗಳಲ್ಲಿ ಹಾಗೂ ಇತರೆಡೆಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈ ಸಂಬಂಧ ಹಬ್ಬದ ದಿನದಂದು ಈ ಕೆಳಕಂಡ ಸೂಚನೆಗಳನ್ನು ಅನುಸರಿಸಲು ಸೂಚಿಸಲಾಗಿದೆ.
1. ಮೆರವಣಿಗೆ ಸಾಗುವ ಹಾದಿಯಲ್ಲಿ ಸಾರ್ವಜನಿಕರಿಗೆ ಆಡಚಣೆ ಉಂಟಾಗದಂತೆ ಸ್ವಯಂಸೇವಕರು ಹಾಗೂ ಅಯೋಜಕರು ರಸ್ತೆಯ ಎರಡು ಬದಿಯಲ್ಲಿ ನಿಂತು ಮೆರವಣಿಗೆಗಾರರಿಗೆ ಸೂಕ್ತ ನಿರ್ದೇಶನವನ್ನು ನೀಡಿ ಮೆರವಣಿಗೆಯನ್ನು ಶಾಂತ ರೀತಿಯಲ್ಲಿ ಸಾಗುವಂತೆ ಸಹಕರಿಸುವುದು ಹಾಗೂ ಸಾರ್ವಜನಿಕ ಸಂಚಾರ ಸುಗಮವಾಗಿ ಸಾಗಲು ಅನುವು ಮಾಡುವುದು.
2. ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೆ ಹರಿತವಾದ ವಸ್ತುಗಳನ್ನು ಹೊಂದಿರಬಾರದು.
3. ಈದ್ ಹಬ್ಬದ ದಿನದಂದು ಮೆರವಣಿಗೆಯ ಸಮಯದಲ್ಲಿ ಯಾವುದೆ ಕಾರಣಕ್ಕೂ ಡಿಜೆ ಗಳನ್ನು ಬಳಸಬಾರದು. 4. ಈದ್ ಹಬ್ಬದ ಪ್ರಯುಕ್ತ ಸ್ತಬ್ದ ಚಿತ್ರಗಳು ಯಾವುದೇ ಪ್ರಚೋದನಾತ್ಮಕ ಅಂಶಗಳನ್ನು ಒಳಗೊಂಡಿರಬಾರದು. 5. ಯಾವುದೇ ಪೂಜಾ ಸ್ಥಳಗಳ (ದೇವಸ್ಥಾನ/ಚರ್ಚಗಳ) ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಬಾರದು.
6. ಮೆರವಣಿಗೆಯ ಸಮಯದಲ್ಲಿ ಅಯೋಜಕರು ವಿದ್ಯುತ್ (ಕೆ.ಇ.ಬಿ) ಇಲಾಖೆಯಿಂದ ಸಿಬ್ಬಂದಿಯವರನ್ನು ನೇಮಿಸಿಕೊಂಡು ಯಾವುದೇ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳತಕ್ಕದ್ದು.
7. ಈದ್ ಹಬ್ಬದ ಮೆರವಣಿಗೆಯ ಸಂದರ್ಭದಲ್ಲಿ ಅಯೋಜಕರು ಬೆಂಕಿನಿಂದಿಸುವ ಸಾಮಗ್ರಿಯನ್ನು ಇಟ್ಟುಕೊಳ್ಳುವುದು.
8. ರಾತ್ರಿ ಮೆರವಣಿಗೆ ಮುಗಿದ ನಂತರ ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚಾಗಿ ದ್ವಿ-ಚಕ್ರ ವಾಹನವನ್ನು ಚಲಿಸಬಾರದು.
9. ಹಿರಿಯ ನಾಗಕರಿಕರಿಗೆ ಶಾಲಾ ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಿಗ್ಗೆ 06-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಾತ್ರ ಬಳಸಿಕೊಳ್ಳಲು ಸ್ಥಳೀಯ ಪೊಲೀಸರ ಅನುಮತಿ/ಪರವಾನಗೆ ಪಡೆದುಕೊಳ್ಳತಕ್ಕದ್ದು ಎಂದಿದೆ.
ಈ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕಗಳಿಂದ ಹೊರಡುವ ಶಬ್ದದ ಪ್ರಮಾಣವನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಳ್ಳುವುದು ಹಾಗೂ ಯಾವುದೇ ಕಾರಣಕ್ಕೂ ಡಿ.ಜೆ. ಸೌಂಡ್ ಸಿಸ್ಟಂ ಅಳವಡಿಸಲು ಅವಕಾಶ ಇರುವುದಿಲ್ಲ ಎಂಬುದಾಗಿ ಮಾರ್ಗಸೂಚಿಯಲ್ಲಿ ಪೊಲೀಸ್ ಇಲಾಖೆ ತಿಳಿಸಿದೆ.
BREAKING: ಶೀಘ್ರವೇ ನಂದಿನಿ ಹಾಲಿನ ದರ ಹೆಚ್ಚಳ: ಸಿಎಂ ಸಿದ್ದರಾಮಯ್ಯ ಘೋಷಣೆ | Nandini Milk Price Hike