ಬೆಂಗಳೂರು: ಬೆಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಓರ್ವ ಮನೆ ಕಳವು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 556 ಗ್ರಾಂ ಚಿನ್ನಾಭರಣ, 1 ಕೆಜಿ 200 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯ 39.62 ಲಕ್ಷ ಎಂಬುದಾಗಿ ತಿಳಿದು ಬಂದಿದೆ.
ಈ ಕುರಿತಂತೆ ಬೆಂಗಳೂರು ನಗರ ಪೊಲೀಸರಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಳ್ಳಕೆರೆಯಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:20/07/2024 ರಂದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:20/07/2024 ರಂದು ಬೆಳಗ್ಗೆ ಪಿರಾದುದಾರರು ಹಾಗೂ ಅವರ ತಾಯಿ ಇಬ್ಬರು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿರುತ್ತಾರೆ. ಸಂಜೆ ವಾಪಸ್ ಬಂದು ನೋಡಲಾಗಿ ಯಾರೋ ಅಪರಿಚಿತರು ಮನೆಯ ಮುಂಬಾಗಿಲಿನ ಬೀಗವನ್ನು ಮುರಿದು, ಒಳ ಪ್ರವೇಶಿಸಿ, ಕೊಠಡಿಯ ಬೀರುವಿನಲ್ಲಿಟ್ಟಿದ್ದ 20 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ಹಾಗೂ ಕ್ಷ 30,000/- ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ ಎಂದಿದ್ದಾರೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:08/12/2024 ರಂದು ಹೆಚ್‌ಬಿಆರ್ ಲೇಔಟ್‌ನ 4ನೇ ಬ್ಲಾಕ್ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ವ್ಯಕ್ತಿಯು ಹೊಂದಿದ್ದ ಬ್ಯಾಗ್‌ನ್ನು ಪರೀಶಿಲಿಸಲಾಗಿ, ಅದರಲ್ಲಿ ಒಂದು ಸ್ಕೂ ಡ್ರೈವ್, ಚಿಕ್ಕದಾದ ಕಬ್ಬಿಣದ ರಾಡ್, ಹಾಗೂ ಕಟ್ಟಿಂಗ್ ಪ್ಲೇಯ ಇದ್ದವು. ಆತನನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಲಾಗಿ ಈ ಪ್ರಕರಣದಲ್ಲಿ ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಬೆಂಗಳೂರು ನಗರ ಹಾಗೂ ವಿವಿಧ ರಾಜ್ಯಗಳಲ್ಲೂ ಸಹ ಮನೆ ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ ಎಂದು ತಿಳಿಸಿದ್ದಾರೆ.
ದಿನಾಂಕ:09/12/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 11 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು. ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆ ಮಾಡಲಾಗಿ, ಕಳವು ಮಾಡಿದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕುಣಿಗಲ್‌ನಲ್ಲಿರುವ ಆತನ ಸ್ನೇಹಿತನಿಗೆ ನೀಡಿರುವುದಾಗಿ ತಿಳಿಸಿರುತ್ತಾನೆ. ತನಿಖೆಯನ್ನು ಮುಂದುವರೆಸಿ, ಕುಣಿಗಲ್‌ನಲ್ಲಿರುವ ಸ್ನೇಹಿತನನ್ನು ವಿಚಾರಣೆ ಮಾಡಲಾಗಿ, ಆತನು ಚಿನ್ನಾಭರಣಗಳನ್ನು ಚಿಕ್ಕಪೇಟೆಯ ಜ್ಯೂವೆಲರಿ ಅಂಗಡಿಯ ಆತನ ಸ್ನೇಹಿತನಿಗೆ ಮಾರಾಟ ಮಾಡುವ ಸಲುವಾಗಿ ನೀಡಿರುವುದಾಗಿ ತಿಳಿಸಿರುತ್ತಾನೆ. ಈ ಕುರಿತು ಚಿಕ್ಕಪೇಟೆಯ ಜ್ಯೂವೆಲರಿ ಶಾಪ್‌ನ ಮಾಲೀಕನಿಗೆ ದಿನಾಂಕ:14/12/2024 ರಂದು ನೋಟಿಸ್‌ನ್ನು ಜಾರಿ ಮಾಡಲಾಗಿರುತ್ತದೆ ಎಂದು ಹೇಳಿದ್ದಾರೆ.
ದಿನಾಂಕ:14/12/2024 ರಂದು ಚಿಕ್ಕಪೇಟೆಯ ಜ್ಯೂವೆಲರಿ ಶಾಪ್‌ನ ಮಾಲೀಕನು 556 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ 200 ಗ್ರಾಂ ಬೆಳ್ಳಿ ವಸ್ತುಗಳನ್ನು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 139,62,000/- (ಮೂವತ್ತೊಂಬತ್ತು ಲಕ್ಷದ ಅರವತ್ತೆರಡು ಸಾವಿರ ರೂಪಾಯಿ.)
ಈ ಪ್ರಕರಣದ ಆರೋಪಿಯ ಬಂಧನದಿಂದ ಹೆಣ್ಣೂರು ಪೊಲೀಸ್ ಠಾಣೆಯ ಒಟ್ಟು 11 ಮನೆ ಕಳವು ಪ್ರಕರಣಗಳು ಬೆಳಕಿಗೆ ಬಂದಿರುತ್ತದೆ ಎಂದಿದ್ದಾರೆ.
ದಿನಾಂಕ 16/12/2024 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ ಎಂದು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪ-ಪೊಲೀಸ್ ಕಮೀಷನರ್ ಡಿ.ದೇವರಾಜ್ ಐ.ಪಿ.ಎಸ್ ಅವರ ಮಾರ್ಗದರ್ಶನದಲ್ಲಿ ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಉಮಾಶಂಕರ್ ಎಂ.ಎಚ್ ಅವರ ಮಾರ್ಗದರ್ಶನದಲ್ಲಿ ಹೆಣ್ಣೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ಎಲ್ ಅವರ ಅಧಿಕಾರಿ/ಸಿಬ್ಬಂದಿಯವರುಗಳು ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
BREAKING: ಬೆಂಗಳೂರಲ್ಲಿ ಹಾಡಹಗಲೇ ಹೋಟೆಲ್ ಮಾಲೀಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ: ಒಂದು ಕೈ ಕಟ್
ವಿವಸ್ತ್ರಗೊಳಿಸಿ, ಥಳಿಸಿ, ಮೂತ್ರ ವಿಸರ್ಜನೆ: ದಲಿತ ಯುವಕ ಆತ್ಮಹತ್ಯೆ | Dalit Teen