ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ರಸ್ತೆ ಗುಂಡಿಗಳನ್ನು ವಾರದೊಳಗೆ ಮುಚ್ಚುವಂತೆ ಡಿಸಿಎಂ ಡಿಕೆ ಶಿವಕುಮಾರ್ ಬಿಬಿಎಂಪಿಗೆ ಸೂಚಿಸಿದ್ದಾರೆ. ಇದಲ್ಲದೇ ತಾವೇ ಖುದ್ದು ತಮ್ಮ ಕಾಲೇಜು ದಿನಗಳ ಬೈಕ್ ಏರಿ ನಗರ ಪ್ರದಕ್ಷಿಣೆ ಮೂಲಕ ವೀಕ್ಷಣೆ ಕೂಡ ಮಾಡಲಿದ್ದಾರೆ.
ರಸ್ತೆಗುಂಡಿ ಸಮಸ್ಯೆ ಹೆಚ್ಚಾಗುತ್ತಿರುವ ಬಗ್ಗೆ ಕೇಳಿದಾಗ “ಸಾರ್ವಜನಿಕರಿಗಾಗಿ ʼರಸ್ತೆ ಗುಂಡಿ ಗಮನʼ ಎನ್ನುವ ಆಪ್ ಅನ್ನು ಪರಿಚಯಿಸಿದ್ದು ಅದರಲ್ಲಿ ಗುಂಡಿಗಳ ಫೋಟೋ ತೆಗೆದು ಅಪ್ ಲೋಡ್ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ರಸ್ತೆಗಳ ವೀಕ್ಷಣೆಗೆ ಎಂದೇ ನನ್ನ ಹಳೆಯ ಬೈಕ್ ದುರಸ್ತಿ ಮಾಡಿಸಿದ್ದೇನೆ. ಅಧಿಕಾರಿಗಳು ಮುಖ್ಯರಸ್ತೆಗಳನ್ನು ಮಾತ್ರ ತೋರಿಸುತ್ತಾರೆ, ಅದಕ್ಕೆ ಒಳ ರಸ್ತೆಗಳನ್ನು ಬೈಕ್ ಅಲ್ಲಿ ಓಡಾಡಿ ವೀಕ್ಷಿಸುತ್ತೇನೆ. ಜೊತೆಗೆ ಕಮಿಷನರ್ ಕೂರಿಸಿಕೊಂಡು ಒಂದು ಸುತ್ತು ಹೋಗುತ್ತೇನೆ” ಎಂದರು.
ಬಿಬಿಎಂಪಿ ಗುತ್ತಿಗೆದಾರರು ಬಿಲ್ ಬಾಕಿ ಬಗ್ಗೆ ಪ್ರತಿಭಟನೆ ವಿಚಾರ ಕೇಳಿದಾಗ “ಗುತ್ತಿಗೆದಾರರ ನೋವು ನನಗೂ ಅರ್ಥವಾಗುತ್ತದೆ. ಶೇ.50 ರಷ್ಟಿದ್ದ ಬಿಲ್ ಬಾಕಿಯನ್ನು ಶೇ.75 ಕ್ಕೆ ಇಳಿಸಿದ್ದೇನೆ. ಒಂದಷ್ಟು ಭಾಗ ಆಯೋಗದ ಮುಂದಿದೆ. ಇದು ಇತ್ಯರ್ಥವಾದ ನಂತರ ಕಾನೂನಾತ್ಮಕವಾಗಿ ಹೇಗೆ ಸಹಾಯ ಮಾಡಲಾಗುವುದೋ ಆ ರೀತಿ ಅವರ ನೆರವಿಗೆ ನಿಲ್ಲಲಾಗುವುದು” ಎಂದರು.
“ಗುತ್ತಿಗೆದಾರರು ಪ್ರತಿಭಟನೆ ಮಾಡುತ್ತೇನೆ. ಕೆಲಸ ಮಾಡುವುದಿಲ್ಲ ಎಂದರೆ ಮತ್ತೊಬ್ಬ ಬಂದು ಕೆಲಸ ನಿರ್ವಹಿಸುತ್ತಾನೆ. ಇವರು ಮಾಡುವುದಿಲ್ಲ ಎಂದರೆ ಮತ್ತೊಬ್ಬ. ಸರ್ಕಾರವನ್ನು ಬ್ಲಾಕ್ ಮೇಲ್ ಮಾಡಬಾರದು” ಎಂದರು.
ಕೆ.ಆರ್.ಪುರಂ ವಾರ್ಡಿನಲ್ಲಿ ನೀರಿನ ಸಮಸ್ಯೆ ಬಗೆಹರಿದಿಲ್ಲ ಎನ್ನುವುದರ ಬಗ್ಗೆ ಕೇಳಿದಾಗ “ಇನ್ನೊಂದು ವಾರದಲ್ಲಿ ಐದನೇ ಹಂತದ ನೀರು ಸರಬರಾಜು ಯೋಜನೆ ಪ್ರಾರಂಭ ಮಾಡಲಾಗುವುದು. ಇದರ ಬಗ್ಗೆ ಆ ಭಾಗದ ಶಾಸಕರು ಗಮನ ಸೆಳೆದಿದ್ದಾರೆ. ಆದಷ್ಟು ಬೇಗ ಬಗೆಹರಿಸಲಾಗುವುದು” ಎಂದರು.
6,346 ಅನಕ್ಷರಸ್ಥ ಚುನಾಯಿತ ‘ಗ್ರಾಮ ಪಂಚಾಯ್ತಿ ಸದಸ್ಯ’ರಿಗೆ ‘ಅಕ್ಷರಾಭ್ಯಾಸ’
BREAKING : ‘ಮನಿ ಲಾಂಡರಿಂಗ್’ ಕೇಸ್ : ‘ED’ ಯಿಂದ AAP ಶಾಸಕ ‘ಅಮಾನತುಲ್ಲಾ ಖಾನ್’ ಅರೆಸ್ಟ್!