ಬೆಂಗಳೂರು: ಕೆರೆಗಳ ನಡುವೆ ಸಂಪರ್ಕ, ರಾಜಕಾಲುವೆ ಪಕ್ಕ 50 ಅಡಿ ಅಂತರದಲ್ಲಿ ಕಟ್ಟಡ ನಿರ್ಮಾಣಕ್ಕೆ ತಡೆ, ರಾಜಕಾಲುವೆ ಪಕ್ಕದಲ್ಲಿ 300 ಕಿ.ಮೀ. ಉದ್ದ ರಸ್ತೆ ನಿರ್ಮಾಣ, ಚರಂಡಿಗಳ ಹೂಳೆತ್ತುವುದು, ಅಪಾಯಕಾರಿ, ಅನಧಿಕೃತ ಕಟ್ಟಗಳ ಸಮೀಕ್ಷೆ ಹಾಗೂ ತೆರವು, ಕಾನೂನು ತಿದ್ದುಪಡಿ ಅಥವಾ ಸುಗ್ರೀವಾಜ್ಞೆ ಮೂಲಕ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ… ಇವಿಷ್ಟು ಬೆಂಗಳೂರು ನಗರದಲ್ಲಿ ಅತಿವೃಷ್ಠಿಯಿಂದ ಉದ್ಭವಿಸುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿ ಮತ್ತಿತರ ಅಧಿಕಾರಿಗಳಿಗೆ ಗುರುವಾರ ನೀಡಿರುವ ಸೂಚನೆಗಳಾಗಿವೆ.
ಬೆಂಗಳೂರಿನಲ್ಲಿ ಅತಿವೃಷ್ಠಿ ವಿಪತ್ತು ನಿರ್ವಹಣೆ ಮತ್ತಿತರ ವಿಷಯಗಳ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿ ಮತ್ತಿತರ ಅಧಿಕಾರಿಗಳ ಜತೆ ತುರ್ತುಸಭೆ ನಡೆಸಿದರು. ಸಭೆ ನಂತರ ಮಾಧ್ಯಮಗೋಷ್ಠಿ ನಡೆಸಿದ ಉಪಮುಖ್ಯಮಂತ್ರಿಗಳು ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ಅಧಿಕಾರಿಗಳಿಗೆ ನೀಡಿರುವ ಸೂಚನೆಗಳ ಬಗ್ಗೆ ಮಾಹಿತಿ ನೀಡಿದರು.
“ಇಂದು ಬೆಂಗಳೂರು ನಗರದಲ್ಲಿ ಅತಿವೃಷ್ಠಿ ಸಮಸ್ಯೆ ನಿವಾರಣೆಗಾಗಿ ಹಲವು ಪ್ರಮುಖ ತೀರ್ಮಾನ ಕೈಗೊಂಡಿದ್ದು, ಅಧಿಕಾರಿಗಳಿಗೆ ಕೆಲವು ನಿರ್ದೇಶನ ನೀಡಿದ್ದೇನೆ. ಎಲ್ಲೆಲ್ಲಿ ಮಳೆನೀರು ವಸತಿ ಪ್ರದೇಶಗಳಿಗೆ ನುಗ್ಗಿ ಸಮಸ್ಯೆ ಎದುರಾಗುತ್ತಿದೆಯೋ ಅಲ್ಲಿ ಪರಿಹಾರಕ್ಕೆ ಯೋಜನೆ ರೂಪಿಸಿ, ಅದಕ್ಕೆ ಅಗತ್ಯವಿರುವ ಹಣಕಾಸಿನ ಅಂದಾಜನ್ನು ನೀಡಲು ವಲಯವಾರು ಆಯುಕ್ತರು, ಮುಖ್ಯ ಎಂಜಿನಿಯರ್ ಗಳು ಹಾಗೂ ಮಳೆನೀರುಗಾಲುವೆ ನಿರ್ವಹಣೆ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಮುಂದಿನ ಒಂದು ವಾರದ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ. ಈ ಅಧಿಕಾರಿಗಳಿಗೆ ಆಯಾ ಪ್ರದೇಶದಲ್ಲಿ ಎಷ್ಟು ಮಳೆ ಬಂದರೆ ಯಾವ ರೀತಿ ತೊಂದರೆಯಾಗುತ್ತದೆ ಎಂಬುದರ ಅರಿವಾಗಿದೆ.
ಮಳೆನೀರು ಸಾಗಲು ಕೆರೆಗಳ ನಡುವೆ ಸಂಪರ್ಕ:
ಎಲ್ಲಾ ಕೆರೆಗಳ ನಡುವೆ ಸಂಪರ್ಕ ಏರ್ಪಡಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಸೂಚಿಸಲಾಗಿದೆ. ಬರಗಾಲದಲ್ಲಿ ಕೆರೆಗಳು ಬತ್ತಿ ಹೋಗಿದ್ದವು. ಕೆರೆಗಳು ತುಂಬಬೇಕು, ಅಂತರ್ಜಲ ಪುನಶ್ಚೇತನಗೊಳ್ಳಬೇಕು. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕೆರೆಗಳಿಗೆ ಕೊಳಚೆ ನೀರನ್ನು ಹರಿಸುವುದಲ್ಲ. ಕೇವಲ ಮಳೆ ನೀರು ಹೋಗುವಂತೆ ನೋಡಿಕೊಳ್ಳಬೇಕು. ಹೀಗಾಗಿ ಕೆರೆಗಳ ನಡುವೆ ಸಂಪರ್ಕ ಸಾಧಿಸಲು ಯೋಜನೆ ರೂಪಿಸಲು ಸೂಚಿಸಿದ್ದೇನೆ.
ಈ ಕಾಮಗಾರಿಗೆ ಎಲ್ಲೆಲ್ಲಿ ಖಾಸಗಿ ಭೂಮಿ ಅಡ್ಡಬರುತ್ತದೆಯೋ ಅಲ್ಲಿ ಟಿಡಿಆರ್ ನೀಡುವ ಮೂಲಕ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದೇವೆ.
ಇನ್ನು ರಾಜಕಾಲುವೆಗಳ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಪ್ರವಾಹದ ನೀರು ಕೆರೆಗೆ ಹೋಗುವುದು ಹಾಗೂ ಕೆರೆಯಿಂದ ಕೋಡಿ ಬೀಳುವ ನೀರು ಸರಾಗವಾಗಿ ಹೋಗಲು ಅನುವಾಗುವಂತೆ ಗೇಟ್ ಅಳವಡಿಸಲು ಸೂಚಿಸಿದ್ದೇನೆ. ಇದಕ್ಕೆ ಬೇಕಾಗಿರುವ ಮೂಲಸೌಕರ್ಯ ತಯಾರಿ ಮಾಡಿಕೊಳ್ಳಲು ಬಿಡಿಎ, ಬಿಬಿಎಂಪಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದವರಿಗೆ ಸೂಚಿಸಿದ್ದೇನೆ.
ರಾಜಕಾಲುವೆ ಅಕ್ಕಪಕ್ಕ 50 ಅಡಿ ಕಟ್ಟಡ ನಿರ್ಮಾಣ ಮಾಡುವಂತಿಲ್ಲ:
ರಾಜಕಾಲುವೆ ಅಕ್ಕಪಕ್ಕದಲ್ಲಿ 50 ಅಡಿಗಳಷ್ಟು ಅಂತರದಲ್ಲಿ ಯಾರೂ ಕಟ್ಟಡ ಕಟ್ಟುವಂತಿಲ್ಲ. ಇಂತಹ ಜಾಗವನ್ನು ಗುರುತಿಸಿದ್ದು, ಇಲ್ಲಿ 300 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಮಾಡಲಾಗುವುದು. ಇದರಿಂದ ಒತ್ತುವರಿ ನಿಲ್ಲುತ್ತದೆ ಹಾಗೂ ಮಳೆನೀರು ಹರಿಯಲು ನೆರವಾಗುತ್ತದೆ. ಯೋಜನೆಯ ಆರಂಭಿಕ ಹಂತಕ್ಕೆ ಹಣ ಮೀಸಲಿಡಲಾಗಿದೆ. ಈ ಭಾಗದ ಭೂಮಾಲೀಕರಿಗೆ ಟಿಡಿಆರ್ ಮೂಲಕ ಪರಿಹಾರ ನೀಡಲಾಗುವುದು.
ಮಳೆ ಪೀಡಿತ ಪ್ರದೇಶಗಳಲ್ಲಿ ಪರಿಹಾರಗಳು ಭರದಿಂದ ಸಾಗುತ್ತಿದೆ. ಕೇಂದ್ರಿಯ ವಿಹಾರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನಿವಾಸಿಗಳನ್ನು ಸ್ಥಳಾಂತರ ಮಾಡಿದ್ದೇವೆ. ನೀರನ್ನು ಹೊರತೆಗೆಯಲಾಗುತ್ತಿದೆ. ಕೆಲವು ಕುಟುಂಬಗಳು ಸ್ಥಳಾಂತರಗೊಳ್ಳಲು ಒಪ್ಪದ ಕಾರಣ ಅವರ ಜವಾಬ್ದಾರಿ ವಹಿಸಿಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಅನಧಿಕೃತ ಕಟ್ಟಡಗಳ ತೆರವಿಗೆ ಸೂಚನೆ:
ಇನ್ನು ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಅನೇಕ ಕಟ್ಟಡಗಳು ಪಾಲಿಕೆ ಗಮನಕ್ಕೆ ಬಂದಿದ್ದು, ಅವುಗಳನ್ನು ಕೂಡಲೇ ಒಡೆದು ಹಾಕಲು ಆದೇಶ ನೀಡಲಾಗಿದೆ. ನಂಜಪ್ಪ ಗಾರ್ಡನ್ ಪ್ರದೇಶದಲ್ಲಿ 10 x 25 ಅಡಿ ನಿವೇಶನದಲ್ಲಿ ನೆಲಮಹಡಿ ಜತೆಗೆ 5 ಮಹಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದನ್ನು ತೆರವುಗೊಳಿಸಲು ಸೂಚಿಸಿದ್ದೇನೆ. ಪ್ರತಿ ವಲಯದಲ್ಲಿ ಅಕ್ರಮ, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಜೀವಕ್ಕೆ ಅಪಾಯ ತರಬಹುದಾದ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದೇನೆ.
ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಅಗತ್ಯ ಕ್ರಮ ಕೈಗೊಳ್ಳಲು ನಮಗೆ ಸಂಪೂರ್ಣ ಅಧಿಕಾರವಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ಯಾವುದೇ ಆಸ್ತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಕ್ರಮಕೈಗೊಳ್ಳಲು ಅಧಿಕಾರವಿದೆ. ಬಿಎಂಟಿಎಫ್, ಬಿಡಿಎ, ಬಿಬಿಎಂಪಿ, ಬಿಎಂಆರ್ ಡಿಎ ಕೆಲವು ತಿದ್ದುಪಡಿ ತಂದು ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಈ ಹಿಂದೆಯೂ ಅಧಿಕಾರವನ್ನು ಮೇಲ್ಕಂಡ ಸಂಸ್ಥೆಗಳಿಗೆ ನೀಡಲಾಗಿತ್ತು. ಆದರೆ 2020-21ರ ಸಮಯದಲ್ಲಿ ಅದನ್ನು ಹಿಂಪಡೆಯಲಾಗಿತ್ತು. ಈಗ ಮತ್ತೆ ನೀಡಲಾಗುತ್ತಿದೆ. ಕಂದಾಯ ಬಡಾವಣೆಯಾಗಿರಲಿ, ಬೇರೆ ಬಡಾವಣೆಯಾಗಿರಲಿ ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಒತ್ತುವರಿ ನಿಲ್ಲಿಸಲು ಸುಗ್ರೀವಾಜ್ಞೆ ತರಲು ಗೃಹ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇವೆ. ಈ ವಿಚಾರವಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು.
ಸೋಮವಾರದಿಂದ ಕಟ್ಟಡಗಳ ಸಮೀಕ್ಷೆ:
ಇನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಗ್ಗೆ ಸೋಮವಾರದಿಂದ ಸಮೀಕ್ಷೆ ನಡೆಸಲಾಗುವುದು. ಖಾಸಗಿ ಹಾಗೂ ಪಾಲಿಕೆಯಿಂದ ಈ ಸಮೀಕ್ಷೆ ನಡೆಸಲಾಗುವುದು. ಯಾವುದಾದರೂ ಕಟ್ಟಡ ಕಾನೂನುಬಾಹಿರವಾಗಿ ನಿರ್ಮಾಣವಾಗುತ್ತಿದೆಯೇ ಎಂದು ಪತ್ತೆಹಚ್ಚಲಾಗುವುದು. ಅಕ್ರಮ ಕಟ್ಟಡ ನಿರ್ಮಾಣ ತಡೆಯಲಾಗುವುದು. ಪ್ರತಿ ಕಟ್ಟಡದ ಫೋಟೋ ಹಾಗೂ ವಿಡಿಯೋಗಳನ್ನು ಸಂಗ್ರಹಿಸಲಾಗುವುದು. ಜಂಟಿ ಆಯುಕ್ತರ ನೇತೃತ್ವದಲ್ಲಿ ಡ್ರೋನ್ ಮೂಲಕ ಇದರ ಮೇಲ್ವಿಚಾರಣೆ ಮಾಡಲಾಗುವುದು.
ಬಿಎಂಆರ್ ಡಿಎ ಹಾಗೂ ಬಿಎಂಟಿಎಫ್ ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ ಸೇರಲಿದ್ದು, ಈ ಪ್ರದೇಶಗಳಲ್ಲಿ ಅಕ್ರಮ ಕಟ್ಟಡ ನಿರ್ಮಾಣ ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಚರಂಡಿಗಳ ಹೂಳೆತ್ತಲಾಗುವುದು.
ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ
ಕಳೆದ ಬಾರಿ ನೀವು ನಗರ ಪ್ರದಕ್ಷಿಣೆ ಮಾಡಿದಾಗ ಇದನ್ನು ಗಮನಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಿರಿ, ಆದರೂ ಕೆಲಸ ಆಗಿಲ್ಲ ಎಂದು ಕೇಳಿದಾಗ, “ಇದಕ್ಕಾಗಿ ಪ್ರತ್ಯೇಕವಾಗಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ಅಂಗಡಿ ಇಟ್ಟು ವ್ಯಾಪಾರ ಮಾಡಬಾರದು ಎಂದು ತೀರ್ಮಾನಿಸಲಾಗಿದೆ. ಇದರ ಬಗ್ಗೆ ಬೇರೆ ಸಮಯದಲ್ಲಿ ಪ್ರತ್ಯೇಕವಾಗಿ ಮಾಹಿತಿ ನೀಡುತ್ತೇನೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಒದಗಿಸಲು ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಗುತ್ತಿದೆ. ಇದು ಮುಗಿದ ನಂತರ ಅವರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಕೆಲವು ಕಡೆ ಬೀದಿ ವ್ಯಾಪಾರಿಗಳ ಮಾಫಿಯಾ ಕೂಡ ಇದೆ. ಯಾರದೋ ಜಾಗದಲ್ಲಿ ಮತ್ಯಾರೋ ಗುತ್ತಿಗೆ ಪಡೆದಿದ್ದಾರೆ. ಇದೆಲ್ಲದರ ಬಗ್ಗೆ ಮುಂದೆ ಚರ್ಚೆ ಮಾಡುತ್ತೇನೆ. ಬೇರೆ ರಾಜ್ಯ ಹಾಗೂ ದೇಶಗಳಲ್ಲಿ ಯಾವ ಮಾದರಿ ಅಳವಡಿಸಲಾಗಿದೆ ಎಂದು ಮಾಹಿತಿ ಕಲೆಹಾಕಲಾಗುತ್ತಿದೆ. ನಮ್ಮಲ್ಲೂ ಮಾದರಿ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.
ವಾಡಿಕೆಗಿಂತ ಹೆಚ್ಚು ಮಳೆ:
ಬೆಂಗಳೂರು ನಗರದ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಬಿಬಿಎಂಪಿ ಅಧಿಕಾರಿಗಳ ತುರ್ತುಸಭೆ ಕೈಗೊಂಡಿದ್ದೆ. ಭಾರಿ ಪ್ರಮಾಣದ ಮಳೆ ನಡುವೆ ಹಗಲು ರಾತ್ರಿ ಅವರು ಶ್ರಮಿಸಿದ್ದಾರೆ. ನಾನು ಎಲ್ಲರ ಕಾರ್ಯವನ್ನು ಪರಿಶೀಲಿಸುತ್ತಿದ್ದೆ. ಮಳೆ ನಮ್ಮ ನಿಮ್ಮ ಕೈಯಲ್ಲಿ ಇಲ್ಲ. 100 ವರ್ಷಗಳಲ್ಲೇ ಐತಿಹಾಸಿಕ ಮಳೆ ಬಂದಿದೆ. ಕೆಲವು ಭಾಗಗಳಲ್ಲಿ ಶೇ 200-300 ರಷ್ಟು ಹೆಚ್ಚಿನ ಮಳೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, 156 ಎಂಎಂ ನಷ್ಟು ಮಳೆಯಾಗಿದೆ. ಈ ಹಿಂದೆ 1997ರಲ್ಲಿ 178, 1999ರಲ್ಲಿ 256 ಎಂಎಂನಷ್ಟು ಮಳೆಯಾಗಿದ್ದ ದಾಖಲೆಗಳಿವೆ.
ಕಳಪೆ ಗುಣಮಟ್ಟದ ಕಟ್ಟಡ ಕುಸಿತದಿಂದ 8 ಮಂದಿ ಕಾರ್ಮಿಕರು, ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರ ಹೊರತಾಗಿ, ಮಳೆಯಿಂದ ಬೇರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದರು.
BIG NEWS: ರಾಜ್ಯದ ಅರಣ್ಯ ಪ್ರದೇಶಗಳ ಸಮಗ್ರ ಕ್ರೋಡಿಕೃತ ದಾಖಲೀಕರಣಕ್ಕೆ ‘ತಜ್ಞರ ಸಮಿತಿ’ ರಚನೆ
ರಾಜ್ಯದಲ್ಲೊಬ್ಬ ಅಪರೂಪದ ‘ಡೊಳ್ಳು ಕಲಾವಿದ’: ಇವರ ಸಾಧನೆ ಕೇಳಿದ್ರೆ ‘ನೀವೇ ಶಾಕ್’ ಆಗ್ತೀರಿ
BIGG NEWS: ‘BJP 8 ಶಾಸಕ’ರು ‘ಕಾಂಗ್ರೆಸ್ ಪಕ್ಷ’ಕ್ಕೆ ಸೇರ್ಪಡೆ: ಶಾಸಕ ಎಸ್.ಟಿ.ಸೋಮಶೇಖರ್ ಸ್ಪೋಟಕ ಹೇಳಿಕೆ