ಬೆಂಗಳೂರು: ನಗರದ ಬಾಬುಸಾಬ್ ಪಾಳ್ಯದಲ್ಲಿ ನಾಲ್ಕು ಹಂತದ ಕಟ್ಟಡಕ್ಕೆ ಅನುಮತಿ ಪಡೆದು ಆರು ಹಂತದ ಕಟ್ಟಡ ಕಟ್ಟಿದ್ದರ ಪರಿಣಾಮ, ಕುಸಿತಗೊಂಡು 8 ಕಾರ್ಮಿಕರು ಸಾವನ್ನಪ್ಪಿದ್ದರು. ಈ ಸಂಬಂಧ ಬಿಬಿಎಂಪಿಯಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದಂತ ವಿನಯ್.ಕೆ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಈ ಕುರಿತಂತೆ ಬಿಬಿಎಂಪಿಯ ಉಪ ಆಯುಕ್ತರು ನಡವಳಿಯನ್ನು ಹೊರಡಿಸಿದ್ದು, ವಿನಯ್ ಕೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಹೊರಮಾವು ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ತಮ್ಮ ವ್ಯಾಪ್ತಿಯ ವಾರ್ಡ್-25, (ಹೊಸ ವಾರ್ಡ್-86), ನಿವೇಶನ ಸಂಖ್ಯೆ: 24, 7ನೇ ‘ಬಿ’ ಅಡ್ಡರಸ್ತೆ, ಅಂಜನಾದ್ರಿ ಎನ್‌ಕ್ಷೇವ್, ಬಾಬುಸಾಬ್ ಪಾಳ್ಯ ಇಲ್ಲಿ ಕಟ್ಟಡದ ಮಾಲೀಕರು ಅನಧಿಕೃತ / ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಕಟ್ಟಡವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ- 2020ರ ಕಟ್ಟಡ ಉಪವಿಧಿಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡದ ಭಾಗಗಳನ್ನು ತೆರವುಗೊಳಿಸಬೇಕೆಂದು ಉಲ್ಲೇಖ-(1)ರಂತೆ ಬಿ.ಬಿ.ಎಂ.ಪಿ ಕಾಯ್ದೆ 2020ರ ನಿಯಮ 248 (3)ರ ಅನ್ವಯ ಸ್ಥಿರೀಕರಣ ಆದೇಶ ಹೊರಡಿಸಿರುತ್ತಾರೆ ಎಂದಿದ್ದಾರೆ.
ನಂತರ ಸಿರೀಕರಣ ಆದೇಶ ಹೊರಡಿಸಿದ ನಂತರ ಕಟ್ಟಡ ಉಪವಿಧಿಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡದ ಭಾಗಗಳನ್ನು ತೆರವುಗೊಳಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಇರುವುದು ಕಂಡುಬಂದಿರುತ್ತದೆ. ಈ ರೀತಿ ನಿರ್ಮಾಣ ಹಂತದಲ್ಲಿದ್ದ ಸದರಿ ಕಟ್ಟಡವು ದಿನಾಂಕ: 22-10-2024ರಂದು ನೆಲಸಮಗೊಂಡು ಸುಮಾರು 08 ಮಂದಿ ಕಟ್ಟಡ ಕಾರ್ಮಿಕರು ಸಾವನ್ನಪ್ಪಿರುವುದು ಉಲ್ಲೇಖ-(2)ರ ವಲಯ ಆಯುಕ್ತರು (ಮಹದೇವಪುರ) ವಲಯ ರವರ ವರದಿಯಿಂದ ಕಂಡುಬಂದಿರುತ್ತದೆ ಎಂದಿದ್ದಾರೆ.
ಈ ರೀತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್-2020ರ ಕಟ್ಟಡ ಉಪವಿಧಿಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡದ ಭಾಗಗಳನ್ನು ತೆರವುಗೊಳಿಸಲು ಸಂಪೂರ್ಣ ವಿಫಲರಾಗಿದ್ದು, ಬಿ.ಬಿ.ಎಂ.ಪಿ ಕಾಯ್ದೆ 2020ರ ಅನ್ವಯ ನಿಗಧಿತ ಅವಧಿಯಲ್ಲಿ ಕೈಗೊಳ್ಳಬೇಕಾದ ಯಾವುದೇ ಕ್ರಮಗಳನ್ನು ಕೈಗೊಳ್ಳದೆ, ಸದರಿ ಕಟ್ಟಡವು ದಿನಾಂಕ: 22-10-2024ರಂದು ಕುಸಿದುಬಿದ್ದು, ಸುಮಾರು 08 ಮಂದಿ ಕಟ್ಟಡ ಕಾರ್ಮಿಕರು ಸಾವಿಗೀಡಾಗಲು ಮೇಲ್ನೋಟಕ್ಕೆ ಕಾರಣಕರ್ತರಾಗಿರುವುದರಿಂದ, ಸದರಿಯವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗಿರುತ್ತದೆ. ಆದರೆ ಶ್ರೀ ವಿನಯ್ ಕೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಇವರು ಗ್ರೂಫ್-‘ಎ’ ವೃಂದದ ಅಧಿಕಾರಿಯಾಗಿದ್ದು, ಶಿಸ್ತು ಪ್ರಾಧಿಕಾರವು ಸರ್ಕಾರದ ನಗರಾಭಿವೃದ್ಧಿ ಇಲಾಖೆಯಾಗಿರುವುದರಿಂದ, ಸರ್ಕಾರದ ಘಟನೋತ್ತರ ಅನುಮೋದನೆಯನ್ನು ನಿರೀಕ್ಷಿಸಿ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪುಸ್ತಾವನೆಯಲ್ಲಿ ವಿವರಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ ವಿನಯ್.ಕೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಹೊರಮಾವು ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಮೇಲ್ಕಂಡಂತೆ 2021ರ ಸರ್ಕಾರಿ ನೌಕರರ (ನಡತೆ) ನಿಯಮಾವಳಿ ನಿಯಮ 3(iii)ನ್ನು ಉಲ್ಲಂಘಿಸಿ, ಗಂಭೀರ ಕರ್ತವ್ಯಲೋಪ ಎಸಗಿರುವುದರಿಂದ ಇಲಾಖಾ ವಿಚಾರಣೆ ನಿರೀಕ್ಷಿಸಿ ತಕ್ಷಣದಿಂದ ಜಾರಿಗೆ ಬರುವಂತೆ 1957ರ ಸಿ.ಸಿ.ಎ ನಿಯಮಾವಳಿ ನಿಯಮ 10ರನ್ವಯ ಸೇವೆಯಿಂದ ಅಮಾನತ್ತುಪಡಿಸಿ ಆದೇಶಿಸಿದೆ. ಸದರಿಯವರು 1958ರ ಕೆ.ಸಿ.ಎಸ್.ಆರ್ ನಿಯಮ-98ರನ್ವಯ ಜೀವಾನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ ಹಾಗೂ ಸದರಿಯವರ ವೇತನ ಬಟವಾಡೆ ಸ್ಥಳವನ್ನು ಮುಖ್ಯ ಅಭಿಯಂತರರು (ಟಿ.ವಿ.ಸಿ.ಸಿ) ಕಛೇರಿಗೆ ವರ್ಗಾಯಿಸಿ ಆದೇಶಿಸಿದೆ. ಮುಂದುವರೆದಂತೆ, ಅಮಾನತ್ತಿನ ಅವಧಿಯಲ್ಲಿ ಅನುಮತಿಯಿಲ್ಲದೇ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ಹೇಳಿದ್ದಾರೆ.
GOOD NEWS: ರಾಜ್ಯದಲ್ಲಿ ಹೊಸದಾಗಿ 11 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ
ಬೆಂಗಳೂರಲ್ಲಿ ಭಾರೀ ಮಳೆ ಅವಾಂತರ: ಸಮಸ್ಯೆ ಪರಿಹಾರಕ್ಕೆ ‘ಡಿಸಿಎಂ ಡಿಕೆಶಿ ಅಧ್ಯಕ್ಷತೆ’ಯಲ್ಲಿ ಸಮಿತಿ ರಚನೆ