ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸರ್ಜರಿಯಾಗಲಿದೆ. ಸಿಎಂ ಸಿದ್ಧರಾಮಯ್ಯ ಅವರು ತಮ್ಮ ಸಂಪುಟವನ್ನು ಪುನರ್ ರಚಿಸಲಿದ್ದಾರೆ. ಹಾಲಿ ಸಚಿವರಿಗೆ ಕೋಕ್ ನೀಡಿ, ಹೊಸಬರಿಗೆ ಅವಕಾಶ ನೀಡಲಿದ್ದಾರೆ. ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಿಎಂ ಸಿದ್ಧರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬುದಾಗಿ ಕಾಂಗ್ರೆಸ್ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಜನಪ್ರಿಯ, ಈಡಿಗ ಸಮುದಾಯದ ಪ್ರಭಾವಿ ನಾಯಕರಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಒಬ್ಬರು. ಈಗಾಗಲೇ ಜಿಲ್ಲೆಯಲ್ಲಿ ದೀವರ ಸಮುದಾಯದ ಮಧು ಬಂಗಾರಪ್ಪ ಅವರಿಗೆ ಶಾಲಾ ಶಿಕ್ಷಣ ಸಚಿವ ಸ್ಥಾನವನ್ನು ನೀಡಲಾಗಿದೆ. ಅವರ ಬೆನ್ನಲ್ಲೇ ಸಿದ್ಧರಾಮಯ್ಯ ಸಂಪುಟ ಸರ್ಜರಿಯಾಗಿ, ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೂ ಸಚಿವ ಸ್ಥಾನ ನೀಡೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ತೆರೆ ಮರೆಯಲ್ಲಿ ಕಸರತ್ತು ನಡೆಸಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿ, ಸಿಎಂ ಸಿದ್ಧರಾಮಯ್ಯ ಸಂಪುಟ ಪುನರಚನೆಯ ನಂತ್ರ, ತಮಗೆ ಸ್ಥಾನ ನೀಡುವಂತೆಯೂ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸದ್ಯ ರಾಜ್ಯ ಸಚಿವ ಸಂಪುಟ ಸರ್ಜರಿಯ ಮಾತು ಜೋರಾಗಿಯೇ ಕೇಳಿ ಬಂದಿದೆ.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಈ ಹಿಂದೆ ನಾನು ಸಚಿವ ಸ್ಥಾನಕ್ಕೆ ಒತ್ತಡ ಹಾಕಿಲ್ಲ. ಬೇಡಿಕೆಯನ್ನು ಇಟ್ಟಿಲ್ಲ ಎನ್ನುತ್ತಲೇ, ಸಚಿವ ಸ್ಥಾನ ನೀಡಿದ್ರೇ ಅದನ್ನು ಯಶಸ್ವಿಯಾಗಿ ನಿಭಾಯಿಸೋದಾಗಿಯೂ ಬಹಿರಂಗ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ರೇಸ್ ನಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಇದ್ದು, ಅವರ ಹೆಸರು ಕೂಡ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಜೊತೆಗೆ ಸಂಪುಟ ಸರ್ಜರಿಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎಂಬುದು ಸಿದ್ದು ಸಂಪುಟದಲ್ಲಿನ ಹಲವರ ಮಾತಾಗಿದೆ.
ಸದ್ಯ ಸಚಿವ ಸ್ಥಾನದ ಆಕಾಂಕ್ಷಿಗಳು, ಒಂದು ವೇಳೆ ಸಂಪುಟ ಸರ್ಜರಿಯಾದ್ರೆ ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಎನ್ನುವ ಪಟ್ಟಿಯಲ್ಲಿ ಬೇಳೂರು ಗೋಪಾಲಕೃಷ್ಣ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಕೃಪಾ ಕಟಾಕ್ಷ ಬೀರಿ, ಸಚಿವ ಸ್ಥಾನ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ
BREAKING : ಚಿತ್ರದುರ್ಗದಲ್ಲಿ ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯ ಕೊಲೆ ಕೇಸ್ : 6 ಆರೋಪಿಗಳು ಅರೆಸ್ಟ್!