ನವದೆಹಲಿ: ಕೋಟ್ಯಂತರ ರೂಪಾಯಿಗಳ ಪಿಎನ್ಬಿ ಹಗರಣ ನಡೆಸಿ ವಿದೇಶಕ್ಕೆ ಪರಾರಿಯಾಗಿದ್ದ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಭಾರತದ ತನಿಖಾ ಸಂಸ್ಥೆಗಳಿಗೆ ದೊಡ್ಡ ಗೆಲುವು ಸಿಕ್ಕಿದೆ. ಬೆಲ್ಜಿಯಂನ ಆಂಟ್ವರ್ಪ್ ಮೇಲ್ಮನವಿ ನ್ಯಾಯಾಲಯವು ಚೋಕ್ಸಿಯನ್ನು ಭಾರತಕ್ಕೆ ಕಳುಹಿಸಲು ಕಾನೂನುಬದ್ಧ ಆಧಾರಗಳಿವೆ ಎಂದು ಮಹತ್ವದ ತೀರ್ಪು ನೀಡಿದೆ.
ಮೆಹುಲ್ ಚೋಕ್ಸಿ ಭಾರತದಲ್ಲಿ ರಾಜಕೀಯ ಸೇಡಿಗೆ ಬಲಿಯಾಗುತ್ತಿದ್ದಾರೆ ಮತ್ತು ತಮ್ಮನ್ನು ಅಪಹರಿಸಲಾಗಿತ್ತು ಎಂಬ ವಾದಗಳನ್ನು ಬೆಲ್ಜಿಯಂ ನ್ಯಾಯಾಲಯ ತಳ್ಳಿಹಾಕಿದೆ. ಭಾರತದಲ್ಲಿ ಆತನಿಗೆ ನ್ಯಾಯಸಮ್ಮತ ವಿಚಾರಣೆ ಸಿಗುವುದಿಲ್ಲ ಎಂಬ ಚೋಕ್ಸಿಯ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಹಸ್ತಾಂತರದ ಆದೇಶ ಹೊರಬರುತ್ತಿದ್ದಂತೆಯೇ ಚೋಕ್ಸಿ ಈಗ ಬೆಲ್ಜಿಯಂನಲ್ಲಿ ರಾಜಕೀಯ ಆಶ್ರಯ (Asylum) ಪಡೆಯಲು ಪ್ರಯತ್ನಿಸುತ್ತಿದ್ದಾನೆ. ಭಾರತದಲ್ಲಿ ತನಗೆ ಜೀವ ಬೆದರಿಕೆ ಇದೆ ಎಂದು ಬಿಂಬಿಸಿ ಹಸ್ತಾಂತರದಿಂದ ತಪ್ಪಿಸಿಕೊಳ್ಳಲು ಈ ಹೊಸ ತಂತ್ರ ಹೂಡಿದ್ದಾನೆ.
ಚೋಕ್ಸಿಯನ್ನು ಭಾರತಕ್ಕೆ ಕರೆತಂದಲ್ಲಿ ಆತನನ್ನು ಮುಂಬೈನ ಅರ್ಥರ್ ರೋಡ್ ಜೈಲಿನ ‘ಬ್ಯಾರಕ್ ನಂಬರ್ 12’ರಲ್ಲಿ ಇರಿಸಲಾಗುವುದು ಎಂದು ಭಾರತ ಸರ್ಕಾರ ಬೆಲ್ಜಿಯಂಗೆ ಭರವಸೆ ನೀಡಿದೆ. ಅಲ್ಲಿ ಆತನಿಗೆ ಕುಡಿಯುವ ನೀರು, ಆಹಾರ ಮತ್ತು ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಅಂತರಾಷ್ಟ್ರೀಯ ಮಾನದಂಡಗಳ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿದೆ.
ನ್ಯಾಯಾಲಯವು ಹಸ್ತಾಂತರಕ್ಕೆ ಪೂರಕವಾಗಿ ಸಲಹೆ ನೀಡಿದೆಯಾದರೂ, ಅಂತಿಮ ನಿರ್ಧಾರವನ್ನು ಬೆಲ್ಜಿಯಂನ ನ್ಯಾಯಾಂಗ ಸಚಿವರು ತೆಗೆದುಕೊಳ್ಳಬೇಕಿದೆ. ಸದ್ಯ ಚೋಕ್ಸಿ ಆಂಟ್ವರ್ಪ್ ಜೈಲಿನಲ್ಲೇ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.








