ಬೆಳಗಾವಿ : ಇತ್ತೀಚೆಗೆ 3 ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಸದಸ್ಯರು ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಸಂಡೂರು ಕ್ಷೇತ್ರದಿಂದ ಆಯ್ಕೆಯಾದ ಶಾಸಕಿ ಅನ್ನಪೂರ್ಣ ತುಕಾರಾಂ, ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಯಾದ ಸಿ.ಪಿ.ಯೋಗೇಶ್ವರ್ ಭಗವಂತ ಹೆಸರಿನಲ್ಲಿ ಹಾಗೂ ಶಿಗ್ಗಾವಿ ಕ್ಷೇತ್ರದ ಆಯ್ಕೆಯಾದ ಫಠಾಣ್ ಯಾಸಿರ್ ಅಹಮದ್ ಖಾನ್ ತಂದೆ, ತಾಯಿ ಹಾಗೂ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಭಾಧ್ಯಕ್ಷ ಯು.ಟಿ.ಖಾದರ್ ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಇತರ ಸಚಿವರು, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ಹಿರಿಯ ಸದಸ್ಯರ ಆಸನಗಳ ಬಳಿ ತೆರಳಿ ನೂತನ ಶಾಸಕರು ಕೃತಜ್ಞತೆ ಸಲ್ಲಿಸಿದರು.
ಪತ್ನಿಯ ಪ್ರಮಾಣ ವಚನಕ್ಕೆ ಸಾಕ್ಷಿಯಾದ ಸಂಸದ ಈ.ತುಕಾರಾಂ : ಸಂಡೂರು ವಿಧಾನ ಸಭಾಕ್ಷೇತ್ರದಿಂದ ಚುನಾಯಿತರಾಗಿರುವ ಅನ್ನಪೂರ್ಣ ತುಕಾರಾಂ ಅವರ ಪ್ರಮಾಣ ವಚನಕ್ಕೆ ಅವರ ಪತಿ ಬಳ್ಳಾರಿ ಸಂಸದ ಈ.ತುಕಾರಾಂ ಅವರು ಸಾಕ್ಷಿಯಾದರು. ಈವರೆಗೆ ಸಂಡೂರು ಕ್ಷೇತ್ರದ ಶಾಸಕರಾಗಿದ್ದ ಈ.ತುಕಾರಾಂ ಅವರು ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಗೊಂಡ ಬಳಿಕ ಸಂಡೂರು ವಿಧಾನ ಸಭಾಕ್ಷೇತ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ನಡೆದ ಉಪಚುನಾವಣೆ ಅವರ ಪತ್ನಿ ವಿಜೇತರಾಗಿದ್ದರು. ವಿಧಾನ ಸಭೆಯ ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತು ಪತ್ನಿ ಅನ್ನಪೂರ್ಣ ಅವರ ಪ್ರಮಾಣ ವಚನ ಸ್ವೀಕರಿಸುವುದನ್ನು ಈ.ತುಕಾರಾಂ ವೀಕ್ಷಿಸಿ ಖುಷಿಪಟ್ಟರು.
ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರದ ಬಳಿಕ ಸದನದಲ್ಲಿ ಸಂವಿಧಾನ ಪೀಠಿಕೆಯನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಸದನದ ಸದಸ್ಯರಿಗೆ ಬೊಧಿಸಿದರು.
ಬೆಂಗಳೂರು ಜನತೆ ಗಮನಕ್ಕೆ: ನಾಳೆ ಈ ಏರಿಯಾಗಳಲ್ಲಿ ‘ಕರೆಂಟ್ ಇರಲ್ಲ’ | Power Cut
Good News: ರಾಜ್ಯದ ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಗುಡ್ ನ್ಯೂಸ್: ಶೀಘ್ರವೇ ಬಡ್ತಿ ಭಾಗ್ಯ – ಸಚಿವ ಮಧು ಬಂಗಾರಪ್ಪ