ಬೆಳಗಾವಿ ಸುವರ್ಣಸೌಧ : ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರ ಆರಂಭವಾದ ಹದಿನಾರನೇ ವಿಧಾನ ಸಭೆಯ 5 ನೇ ಅಧಿವೇಶನದ ಮೊದಲನೆ ದಿನ, ಕಳೆದ ಅಧಿವೇಶನದ ತರುವಾಯ ಹಾಗೂ ಪ್ರಸಕ್ತ ಅಧಿವೇಶನದ ಮುನ್ನ ಅಗಲಿದ ವಿಧಾನ ಸಭೆಯ ಮಾಜಿ ಸದಸ್ಯರು ಹಾಗೂ ನಾಡಿನ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷ ಹಾಗೂ ಸಚಿವರಾಗಿದ್ದ ಮನೋಹರ ಹನುಮಂತಪ್ಪ ತಹಶೀಲ್ದಾರ್, ಮಾಜಿ ಸಚಿವ ಕೆ.ಹೆಚ್.ಶ್ರೀನಿವಾಸ್, ಮಾಜಿ ಸದಸ್ಯರುಗಳಾದ ಬಸವರಾಜು ಎ.ಎಸ್., ಲಕ್ಷ್ಮೀ ನಾರಾಯಾಣ.ಕೆ ಹಾಗೂ ವೆಂಕಟರೆಡ್ಡಿ ಮುದ್ನಾಳ್ , ಖ್ಯಾತ ಕೈಗಾರಿಕೋದ್ಯಮಿ ರತನ್ ನವಲ್ ಟಾಟಾ ಹಾಗೂ ಕಲಬುರ್ಗಿ ಸೂಫಿ ಸಂತ ಸೈಯದ್ ಶಹಾ ಖುಸ್ರೋ ಹುಸೇನಿ ಅವರ ನಿಧನ ಸಂತಾಪ ಸೂಚನೆ ನಿರ್ಣಯವನ್ನು ಸದನದ ಮುಂದೆ ಮಂಡಿಸಿದರು.
ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಸಂತಾಪ ಸೂಚನೆ ನಿರ್ಣಯದ ಮೇಲೆ ಮಾತನಾಡಿ, ಹಾನಗಲ್ ಕ್ಷೇತ್ರ ಪ್ರತಿನಿಧಿಸುತಿದ್ದ ಮನೋಹರ ಹನುಮಂತಪ್ಪ ತಹಶೀಲ್ದಾರ್ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2015ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ನನ್ನ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು ಎಂದು ಸ್ಮರಿಸಿದರು.
ಮಾಜಿ ಸಚಿವ ಕೆ.ಹೆಚ್. ಶ್ರೀನಿವಾಸ ಅವರು ಉಪನ್ಯಾಸ, ವಕೀಲರು ಹಾಗೂ ಸಾಹಿತಿಯಾಗಿ ಬಹುಮುಖ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ಶಾಸಕನಾಗಿದ್ದಾಗ, ಕೆ.ಹೆಚ್.ಶ್ರೀನಿವಾಸ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದರು. ದೇವರಾಜ ಅರಸು ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ ಹಿರಿಮೆ ಅವರದ್ದಾಗಿದೆ. ಮಾಜಿ ಸದಸ್ಯರುಗಳಾದ ಬಸವರಾಜು ಎ.ಎಸ್., ಲಕ್ಷ್ಮೀ ನಾರಾಯಾಣ.ಕೆ ಹಾಗೂ ವೆಂಕಟರೆಡ್ಡಿ ಮುದ್ನಾಳ್ ಅವರು ಸಹ ಉತ್ತಮ ಜನಸೇವೆ ಮಾಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉದ್ಯಮಿ ರತನ್ ನವಲ್ ಟಾಟಾ ಬಡವರ ಪರವಾಗಿ ಕಾಳಜಿ ಹೊಂದಿವರಾಗಿದ್ದರು. ಜನರಿಗೆ ಕೈಗೆಟಕುವ ದರದಲ್ಲಿ ಟಾಟಾ ನ್ಯಾನೋ ಎಂಬ ಕಾರು ಸೃಷ್ಠಿಸಿದ ಕೀರ್ತಿ ಅವರದು. ಅವರ ಅಗಲಿಕೆ ನಾಡಿಗೆ ಹಾಗೂ ಉದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕಲಬುರಗಿ ಐತಿಹಾಸಿಕ ಧಾರ್ಮಿಕ ಕೇಂದ್ರ ಖಾಜಾ ಬಂದಾನವಾಜ್ ದರ್ಗಾದ ಸೂಫಿ ಸಂತ ಸೈಯದ್ ಶಹಾ ಕುಸ್ರೋ ಹುಸೇನಿ ಅವರು ಅಲ್ಪಸಂಖ್ಯಾತರ ಶಿಕ್ಷಣಕ್ಕೆ ನೀಡಿದ ಕೊಡುಗೆ ಪರಿಗಣಿಸಿ ನಾನು ಮುಖ್ಯಮಂತ್ರಿಯಾದ್ದ ವೇಳೆ 2017ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಅವರ ನಿಧನದಿಂದ ನಾಡಿಗೆ ನಷ್ಟ ಉಂಟಾಗಿದೆ. ಅಗಲಿದ ಎಲ್ಲ ಗಣ್ಯರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಸದನದ ಮಾಜಿ ಸದಸ್ಯರು ಹಾಗೂ ದೇಶ ಸೇವೆ ಮಾಡಿದ ಗಣ್ಯಮಾನ್ಯರು ಅಗಲಿದಾಗ ಅವರನ್ನು ಸ್ಮರಿಸುವುದು ಸದನದ ಸಂಪ್ರದಾಯ ಹಾಗೂ ನಮ್ಮೆಲ್ಲರ ಕರ್ತವ್ಯವಾಗಿದೆ. ಮಾಜಿ ಸಚಿವ ಮನೋಹರ ಹನುಮಂತಪ್ಪ ತಹಶೀಲ್ದಾರ್ ಹಾನಗಲ್ ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ಅವರಿಗೆ ಹಲವು ಚುನಾವಣೆಗಳಲ್ಲಿ ಪ್ರತಿಸ್ಪರ್ಧಿಯಾಗಿದ್ದರು. ರಾಜಕೀಯದ ಕೊನೆಯ ಘಟ್ಟದಲ್ಲಿ ಬಿಜೆಪಿ ಪಕ್ಷ ಸೇರಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು ಎಂದರು.
ಉದ್ಯಮಿ ರತನ್ ನವಲ್ ಟಾಟಾ ಅವರು ದೇಶದ ಕೈಗಾರಿಕೆ ಹಾಗೂ ಉದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಬೆಂಗಳೂರಿನಲ್ಲಿನ ಟಾಟಾ ಇನ್ಸಿಟ್ಯೂಟ್ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆಯಲು ರತನ್ ಟಾಟಾ ಕಾರಣಕರ್ತರಾಗಿದ್ದಾರೆ. ಇವರಿಗೆ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ನೀಡಿದ್ದರೆ, ಭಾರತದ ಜನರ ಮನಸ್ಸಿನಲ್ಲಿ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಉದ್ದಿಮೆಯಲ್ಲಿ ಗಳಿಸಿದ ಲಾಭದಲ್ಲಿ ಹೆಚ್ಚಿನ ಹಣವನ್ನು ಸಮಾಜಕ್ಕೆ ನೀಡಿದ್ದಾರೆ. ಜಿ.ಆರ್.ಜಿ ಟಾಟಾ ಸ್ಥಾಪಿಸಿ ಏರ್ ಇಂಡಿಯಾವನ್ನು ಭಾರತ ಸರ್ಕಾರ ತನ್ನ ಸ್ವಾಧೀನ ಪಡೆದುಕೊಂಡಿತ್ತು. ಆದರೆ ಸಂಸ್ಥೆಯ ನಿರ್ವಹಣೆಯನ್ನು ಪುನಃ ರತನ್ ಟಾಟ ವಹಿಸಿಕೊಂಡು ಏರ್ ಇಂಡಿಯಾಗೆ ಹೊಸ ರೂಪ ನೀಡಲು ಪ್ರಯತ್ನಿಸಿದರು ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಮಾಜಿ ಸಚಿವ ಮನೋಹರ ತಹಶೀಲ್ದಾರ್ ಸಮಚಿತ್ತ ಮನಸ್ಸಿನ ವ್ಯಕ್ತಿತ್ವ ಹೊಂದ್ದರು. ಕೆ.ಹೆಚ್.ಶ್ರೀನಿವಾಸ ಅವರು ಅಪರ ವಿಷಯ ಅರಿತಿದ್ದು, ಉತ್ತಮ ಸಂಸದೀಯ ಪಟು ಆಗಿದ್ದರು. ಉದ್ಯಮಿ ರತನ್ ಟಾಟಾ ಸ್ಥಾಪಿಸಿದ ಟಿ.ಸಿ.ಎಸ್. ಸಾಪ್ಟವೇರ್ ಕಂಪನಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ತಾವು ಗಳಿಸಿದ ಲಾಭದಲ್ಲಿ ಶೇ.60 ರಷ್ಟು ಸಮಾಜ ಸೇವೆಗೆ ಮುಡುಪಾಗಿಟ್ಟಿದ್ದರು ಎಂದರು.
BREAKING: ಲೋಕಸಭೆ, ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ | Lok Sabha, Rajya Sabha adjourned
ಬೆಂಗಳೂರು ಜನತೆ ಗಮನಕ್ಕೆ: ನಾಳೆ ಈ ಏರಿಯಾಗಳಲ್ಲಿ ‘ಕರೆಂಟ್ ಇರಲ್ಲ’ | Power Cut