ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ಎಲ್ಲ ವೃತ್ತಿಪರ ಕೋರ್ಸ್ ಗಳ ಎರಡನೇ ಸುತ್ತಿನ ಪ್ರವೇಶ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದೆ. ಲಭ್ಯ ಸೀಟುಗಳ ವಿವರಗಳನ್ನು ಕೂಡ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಗುರುವಾರದಿಂದ (ಆ.21) ಇಚ್ಛೆ/ಆಯ್ಕೆಗಳನ್ನು ಬದಲಿಸುವ/ತೆಗೆಯುವ ಕೆಲಸವನ್ನೂ ಮಾಡಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಆ.25ರವರೆಗೆ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆ.29ರಂದು ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರ್ಯುವೇದ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಕೂಡ ಪ್ರಕಟಿಸಿದ್ದು, ಈ ಕೋರ್ಸ್ ಗೆ ಮಾತ್ರ ಇಚ್ಚೆ/ಆಯ್ಕೆಗಳನ್ನು ದಾಖಲು ಮಾಡಲು ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಚಾಯ್ಸ್-1 ಆಯ್ಕೆ ಮಾಡಿಕೊಂಡು ಪ್ರವೇಶ ಪಡೆದಿರುವವರನ್ನು ಹೊರತುಪಡಿಸಿ, ಛಾಯ್ಸ್- 2 ಹಾಗೂ 3 ಆಯ್ಕೆ ಮಾಡಿದವರಿಗೂ ಆಯುರ್ವೇದ ಕೋರ್ಸ್ ಗಳ ಪ್ರವೇಶಕ್ಕೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದುವರೆಗೂ ಸೀಟು ಹಂಚಿಕೆಯಾಗದಿರುವವರು ಈ ಸುತ್ತಿನಲ್ಲಿ ಭಾಗವಹಿಸಬೇಕಿದ್ದರೆ ಕಡ್ಡಾಯವಾಗಿ ಲಾಗಿನ್ ಆಗಿ ತಮಗೆ ಸೀಟಿನ ಅಗತ್ಯ ಇದೆ ಎನ್ನುವುದನ್ನು ಖಾತರಿಪಡಿಸಲು ಒಪ್ಪಿಗೆಯ (I Agree) ಬಟನ್ ಒತ್ತಬೇಕು. ಹಾಗೆಯೇ ತಮ್ಮ ಇಚ್ಛೆ/ಆಯ್ಕೆಗಳನ್ನು ಕೂಡ ಮೇಲೆ/ಕೆಳಗೆ ಮಾಡುವ ಹಾಗೂ ತೆಗೆದು ಹಾಕುವುದಕ್ಕೂ ಅವಕಾಶ ನೀಡಲಾಗಿದೆ. ಏನೂ ಮಾಡದೆ ಸುಮ್ಮನಿದ್ದರೂ ಅಂತಹವರನ್ನು ಮುಂದಿನ ಸುತ್ತಿಗೆ ಪರಿಗಣಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಎರಡನೇ ಸುತ್ತಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ ಗಳಿಗೆ ಸೀಟು ಹಂಚಿಕೆಯಾದವರು ಕಡ್ಡಾಯವಾಗಿ ಕಾಲೇಜಿಗೆ ಹೋಗಿ ಸೇರಲೇ ಬೇಕು. ಇವರಿಗೆ ಛಾಯ್ಸ್- 2 ಮತ್ತು ಛಾಯ್ಸ್-3ಕ್ಕೆ ಅವಕಾಶವೇ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಅಣಕು ಫಲಿತಾಂಶ
ಅಭ್ಯರ್ಥಿಗಳು, ಈಗಾಗಲೇ ನಮೂದಿಸಿರುವ ತಮ್ಮ ಇಚ್ಛೆ/ಆಯ್ಕೆಗಳನ್ನು ಅದಲುಬದಲು ಮಾಡಿಕೊಂಡ ನಂತರ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟಿಸಲಾಗುತ್ತದೆ. ಇದು ಬಹುತೇಕ ಅಂತಿಮ ಫಲಿತಾಂಶವೇ ಆಗಿರುತ್ತದೆ. ಎಂಸಿಸಿ ವತಿಯಿಂದ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರ ಆಲ್ ಇಂಡಿಯಾ ಕೋಟಾ ಅಥವಾ ಬೇರೆ ರಾಜ್ಯದಲ್ಲಿ ಸೀಟು ಸಿಕ್ಕಿ, ಅಲ್ಲಿಗೆ ಹೋಗಲು ಆಸಕ್ತಿ ಇರುವವರಿಗೆ ಯಾವುದೇ ದಂಡ ಇಲ್ಲದೆ ಹೊರಗೆ ಹೋಗಲು ಈ ಹಂತದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಎಂಸಿಸಿ ಫಲಿತಾಂಶ ಪ್ರಕಟಣೆಯಾದ ಒಂದು ದಿನ ಅವಕಾಶ ಕೊಟ್ಟು ಹೊರ ಹೋಗುವವರನ್ನು ನೋಡಿಕೊಂಡು, ಅಂತಿಮ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಅಖಿಲ ಭಾರತ ಕೋಟಾದಲ್ಲಿ ಸೀಟು ಸಿಕ್ಕಿ ಅಲ್ಲೇ ಪ್ರವೇಶ ಪಡೆಯುವವರು ಹೊರ ಹೋದರೆ ನಮ್ಮದೇ ರಾಜ್ಯದ ಮತ್ತಷ್ಟು ಮಕ್ಕಳಿಗೆ ಅನುಕೂಲ ಮಾಡಿಕೊಡಲು ಎರಡನೇ ಸುತ್ತಿನ ಫಲಿತಾಂಶವನ್ನು ಒಂದು ದಿನ ತಡ ಮಾಡಿ ಪ್ರಕಟಿಸಲಾಗುವುದು. ಇದು ಈ ಬಾರಿಯ ವಿಶೇಷ ಎಂದು ಅವರು ವಿವರಿಸಿದ್ದಾರೆ.
ಸಾಗರ, ಹೊಸನಗರದಲ್ಲಿ ಅಭಿವೃದ್ಧಿ ಪರ್ವಕ್ಕೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ನಾಂದಿ: 1 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ