ಬೆಂಗಳೂರು: ವಿಧಾನಸಭೆಯಲ್ಲಿ ಕರ್ನಾಟಕದ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯಲ್ಲಿ ಇರೋದು ಕಡ್ಡಾಯಗೊಳಿಸೋ ಮಸೂದೆಗೆ ಅಂಕಿತ ದೊರೆತಿದೆ. ಇನ್ನೂ ವಿಧಾನಪರಿಷತ್ ನಲ್ಲಿ ಪಾಸ್ ಆಗಿ ಕಾಯ್ದೆಯಾಗಿ ಜಾರಿಯಾಗೋದು ಮಾತ್ರ ಬಾಕಿ ಇದೆ. ಇದರ ನಡುವೆ ಬೆಂಗಳೂರಲ್ಲಿ ಕನ್ನಡ ನಾಮಫಲಕ ಅಳವಡಿಸದಂತ 18 ಅಂಗಟಿಗಳಿಗೆ ಬಿಬಿಎಂಪಿ ಬೀಗ ಜಡಿದಿದೆ.
ಬೆಂಗಳೂರು ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆ ಬಳಸದ ಉದ್ದಿಮೆಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಉದ್ದಿಮೆ ಮಾಲೀಕರಿಗೆ ಕೂಡಲೆ ಕನ್ನಡ ನಾಮಫಲಕಗಳನ್ನು ಅಳವಡಿಸಲು ಸೂಚನೆ ನೀಡಲಾಗುತ್ತಿದೆ.
ಅದರಂತೆ ಪೂರ್ವ ವಲಯ ವ್ಯಾಪ್ತಿಯಲ್ಲಿ ಇಂದು ಶಾಂತಿನಗರ ಹಾಗೂ ಸಿ.ವಿ ರಾಮನ್ನಗರ ವ್ಯಾಪ್ತಿಯಲ್ಲಿ ವಲಯ ಆಯುಕ್ತರಾದ ಶ್ರೀಮತಿ ಸ್ನೇಹಲ್, ವಲಯ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ ರವರ ನಿರ್ದೇಶನದಂತೆ ವಲಯ ಆರೋಗ್ಯಾಧಿಕಾರಿಯಾದ ಡಾ. ಸವಿತಾ ರವರ ನೇತೃತ್ವದಲ್ಲಿ ಆರೋಗ್ಯ ವೈದ್ಯಾಧಿಕಾರಿಗಳ ತಂಡವು ಉದ್ದಿಮೆಗಳನ್ನು ಪರಿಶೀಲಿಸಿ ನಿಯಮಾನುಸಾರ ಶೇ.60% ರಷ್ಟು ಕನ್ನಡ ಭಾಷೆ ನಾಮಫಲಕಗಳನ್ನು ಅಳವಡಿಸದಿರುವ ಉದ್ದಿಮೆಗಳಿಗೆ ಭೇಟಿ ನೀಡಿ ಪರಿಶೀಲಿಸಸಲಾಯಿತು.
ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ರೆಸಿಡೆನ್ಸಿ ರಸ್ತೆಯಲ್ಲಿ ಇದುವರೆಗೆ 200ಕ್ಕೂ ಹೆಚ್ಚು ವಾಣಿಜ್ಯ ಮಳಿಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ 170ಕ್ಕೂ ಹೆಚ್ಚು ಮಳಿಗೆಗಳಲ್ಲಿ ಈಗಾಗಲೇ ಕನ್ನಡ ನಾಮಫಲಕಗಳನ್ನು ಅಳವಡಿಸಿಕೊಂಡಿರುತ್ತಾರೆ. ಇನ್ನು ಕನ್ನಡ ನಾಮಫಲಕ ಅಳವಡಿಸದೇ ಇರುವ ಮಳಿಗೆಗಳ ಮಾಲೀಕರಿಗೆ ಅಂತಿಮ ತಿಳುವಳಿಕೆ ಪತ್ರ ನೀಡಿ ಕೂಡಲೇ ನಾಮಫಲಕ ಬದಲಾಯಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ಆಂಗ್ಲ ಭಾಷೆ ಬಳಸಿರುವ ವಾಣಿಜ್ಯ ಮಳಿಗೆಗಳ ನಾಮಫಲಕಗಳನ್ನು ಉದ್ದಿಮೆಗಳಿಂದಲೇ ಆಂಗ್ಲ ಭಾಷೆ ಕಾಣದಂತೆ ಮುಚ್ಚಲ್ಪಟ್ಟಿದ್ದು, ಕೂಡಲೆ ಶೇ. 60 ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿಕೊಳ್ಳುವಂತೆ ಪಾಲಿಕೆಯ ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿರುತ್ತಾರೆ. ಇದಲ್ಲದೆ ನಗರದ ಬ್ರಿಗೇಡ್ ರಸ್ತೆ, ಎಂ.ಜಿ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ಗಳಲ್ಲಿ ಕನ್ನಡ ನಾಮಫಲಕ ಬಳಸದ ಸುಮಾರು 18 ಉದ್ದಿಮೆಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ತಪಾಸಣೆಯ ವೇಳೆ ವಲಯ ಆರೋಗ್ಯ ವೈದ್ಯಾಧಿಕಾರಿಗಳು, ಸ್ಥಳೀಯ ಪೋಲಿಸ್ ಸಿಬ್ಬಂದಿ, ಮಾರ್ಷಲ್ಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬರ್ಲಿನ್ ಚಲನಚಿತ್ರೋತ್ಸವ 2024ರಲ್ಲಿ ‘ಪುಷ್ಪ-3’ ಬಿಡುಗಡೆ ಬಗ್ಗೆ ಸುಳಿವು ನೀಡಿದ ‘ಅಲ್ಲು ಅರ್ಜುನ್’