ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಯಂ ನೇಮಕಾತಿಗೆ ಒಳಪಟ್ಟಿರುವ ಪೌರಕಾರ್ಮಿಕರ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಸಲ್ಲಿಸಬೇಕಿರುವ ಇತರೆ ಪ್ರಮಾಣ ಪತ್ರಗಳಿಗೆ ತಗಲುವ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುವುದು.
ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಯ ವಿಭಾಗದಲ್ಲಿ ನೇರಪಾವತಿಯಡಿ (ಡಿಪಿಎಸ್) ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರುಗಳ ಪೈಕಿ, ರೋಸ್ಟರ್ ಅಥವಾ ಮೀಸಲಾತಿ ನಿಯಮಾವಳಿಗಳನ್ವಯ 12,692 ಪೌರಕಾರ್ಮಿಕರ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು 16ನೇ ನವೆಂಬರ್ 2024 ರಂದು ಪ್ರಚುರಪಡಿಸಲಾಗಿರುತ್ತದೆ.
ಈಗಾಗಲೇ ಸುಮಾರು 4,000 ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಾಗಿದ್ದು, ಉಳಿದ ಪೌರಕಾರ್ಮಿಕರಿಗೆ ಅತಿ ಶೀಘ್ರದಲ್ಲೇ ನೇಮಕಾತಿ ಆದೇಶ ಪತ್ರಗಳನ್ನು ನೀಡಲು ಕ್ರಮ ವಹಿಸಲಾಗುತ್ತಿದೆ.
ನೇಮಕಗೊಂಡ ಪೌರಕಾರ್ಮಿಕ ಅಭ್ಯರ್ಥಿಗಳ ಸಿಂಧುತ್ವ ಪರಿಶೀಲನೆಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ವರದಿಯನ್ನು ಪಡೆಯಬೇಕಿದ್ದು, ಈ ಸಲುವಾಗಿ ಸೇವಾಸಿಂಧು ಪೋರ್ಟಲ್ ನಲ್ಲಿ ಈಗಾಗಲೇ ಅರ್ಜಿಗಳನ್ನು ಅಪ್ಲೋಡ್ ಮಾಡಲಾಗಿರುತ್ತದೆ. ಈ ಪೈಕಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಬಿಬಿಎಂಪಿ ವತಿಯಿಂದಲೇ ವೆಚ್ಚ ಭರಿಸಲಾಗುವುದು:
ಸೇವಾ ಸಿಂಧು ಅರ್ಜಿದಾರರ ಪ್ರಮಾಣ ಪತ್ರ ಪೋರ್ಟಲ್ ನಲ್ಲಿ ಅರ್ಜಿದಾರರ ಲಾಗಿನ್ ನಿಂದ ಪ್ರಮಾಣ ಪತ್ರ-1 ಹಾಗೂ ಪ್ರಮಾಣ ಪತ್ರ-2 ಆಪ್ಲೋಡ್ ಮಾಡಬೇಕಾಗಿರುತ್ತದೆ. ಈ ಸಂಬಂಧ ಎರಡೂ ಪ್ರಮಾಣ ಪತ್ರಗಳ ಛಾಪಾ ಕಾಗದ ಹಾಗೂ ನೋಟರಿ ಸೇರಿದಂತೆ ಇನ್ನಿತರೆ ದಾಖಲಾತಿಗಳಿಗೆ ತಗಲುವ ವೆಚ್ಚವನ್ನು ನೇಮಕಾತಿ ಆದೇಶ ಪತ್ರಗಳು ನೀಡಿದವರನ್ನು ಹೊರತುಪಡಿಸಿ ಇನ್ನುಳಿದ ಪೌರಕಾರ್ಮಿಕರಿಗೆ ಪಾಲಿಕೆಯಿಂದಲೇ ಭರಿಸಲಾಗುವುದು.
ಪ್ರಮಾಣ ಪತ್ರಗಳಿಗೆ ತಗಲುವ ಮೊತ್ತವನ್ನು ಪ್ರಸಕ್ತ ಸಾಲಿನ ಆಯವ್ಯಯದ ಲೆಕ್ಕ ಶೀರ್ಷಿಕೆ ಸಂಖ್ಯೆ: 02-210999 ಇತರೆ ಸಾಮಾನ್ಯ ಮತ್ತು ವಿವಿಧ ವೆಚ್ಚಗಳಡಿ ಭರಿಸುವಂತೆ ಎಲ್ಲಾ ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
ಯಾವುದೇ ಆಮಿಷಗಳಿಗೆ ಒಳಗಾಗದಿರಿ:
ಪೌರಕಾರ್ಮಿಕ ನೇಮಕಾತಿ ವಿಚಾರವಾಗಿ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿ, ಅಪ್ಲೋಡ್ ಮಾಡಲು ಪಾಲಿಕೆಯ ಅಧಿಕಾರಿಗಳು ಸಹಕರಿಸಲಿದ್ದು, ಈ ಸಂಬಂಧ ನೇಮಕಗೊಂಡ ಪೌರಕಾರ್ಮಿಕರು ಯಾವುದೇ ಮಧ್ಯವರ್ತಿಗಳನ್ನು ಭೇಟಿ ಮಾಡಕೂಡದು. ಜೊತೆಗೆ ಯಾವುದೇ ಆಮಿಷಗಳಿಗೆ ಒಳಗಾಗಬಾರದೆಂದು ಪೌರಕಾರ್ಮಿಕ ಹುದ್ದೆಗೆ ಆಯ್ಕೆಯಾಗಿರುವ, ಸಿಂಧುತ್ವ ಪ್ರಮಾಣ ಪತ್ರ ಅಗತ್ಯವಿರುವವರಲ್ಲಿ ಆಡಳಿತ ವಿಭಾಗದ ವಿಶೇಷ ಆಯುಕ್ತರು ಹಾಗೂ ಪೌರಕಾರ್ಮಿಕರ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ನವೀನ್ ಕುಮಾರ್ ರಾಜು ರವರು ಕೋರಿದ್ದಾರೆ.
ನಿಮ್ಮ ಮೊಬೈಲ್ ಫೋನಿನ `ಬ್ಯಾಕ್ ಕವರ್’ ಬಣ್ಣ ಬದಲಾಗಲು ಕಾರಣ ಏನು ಗೊತ್ತಾ?
ಭಜರಂಗಿ ಖ್ಯಾತಿಯ ನಟಿ ರುಕ್ಮಿಣಿ ವಿಜಯ್ ಕುಮಾರ್ ಬ್ಯಾಗ್, ಡೈಮಂಡ್ ರಿಂಗ್ ಕದ್ದಿದ್ದ ಕ್ಯಾಬ್ ಚಾಲಕ ಅರೆಸ್ಟ್