ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿರುವಂತ ಸಾಗರ ತಾಲ್ಲೂಕು ಬಂಟರ ಸಂಘಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಎಸ್ ಎನ್ ನಗರದ ಮೊದಲ ಕ್ರಾಸ್ ನಲ್ಲಿರುವಂತ ಸಾಗರ ತಾಲ್ಲೂಕು ಬಂಟರ ಸಂಘಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ, ಹೊಸದಾಗಿ ನಿರ್ಮಾಣ ಮಾಡಲಾಗುತ್ತಿರುವಂತ ಸಾಗರ ತಾಲ್ಲೂಕು ಬಂಟರ ಸಂಘದ ಸಮುದಾಯ ಭವನವನ್ನು ವೀಕ್ಷಣೆ ಮಾಡಿದರು.
ಈ ವೇಳೆ ಸಾಗರ ಬಂಟರ ಸಂಘದ ತಾಲ್ಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರು, ಸಂಘಕ್ಕೆ ಭೇಟಿ ನೀಡಿದಂತ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಸುಗ್ಗಿ ಸುಧಾಕರ ಶೆಟ್ಟಿ ಅವರಿಗೆ ಶಾಲು ಹೊದಿಸಿ, ಹಾರಹಾಕಿ ಸನ್ಮಾನಿಸಿ ಗೌರವಿಸಿದರು.
ಸಾಗರ ತಾಲ್ಲೂಕು ಬಂಟರ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದಂತ ಸಭಾಪತಿ ಬಸವರಾಜ ಹೊರಟ್ಟಿ ಸಣ್ಣ ಸಮುದಾಯವೊಂದು ಇಷ್ಟು ದೊಡ್ಡದಾದಂತ ಸಮುದಾಯ ಭವನ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯವೇ ಸರಿ. ಸರ್ಕಾರದ ಮಟ್ಟದಲ್ಲಿ ಸಂಘದ ಭವನಕ್ಕೆ ಬೇಕಿರುವಂತ ಎಲ್ಲಾ ನೆರವು ಕಲ್ಪಿಸಿಕೊಡುವಂತ ಕಾರ್ಯ ಮಾಡುವುದಾಗಿ ಹೇಳಿದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಗರ ತಾಲ್ಲೂಕು ಬಂಟರ ಸಂಘವು ಹಲವು ಸಾಮಾಜಿಕ ಸೇವೆಯಲ್ಲಿ ತೊಡಗಿದೆ. ಈ ಕಟ್ಟಡವು ಸಂಘಟನೆಯ ದ್ಯೂತಕವಾಗಿದೆ. ಸುಧೀರ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಈ ಕಟ್ಟಡಕ್ಕೆ ಸರ್ಕಾರದಿಂದ ಅನುದಾನ ಕೊಡಿಸುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಾಗರದ ಬಂಟರ ಸಂಘದ ತಾಲ್ಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ ಸಭಾಪತಿ ಹೊರಟ್ಟಿ ಅವರು ಸರಳ, ಸಜ್ಜನ ರಾಜಕಾರಣಿಯಾಗಿದ್ದಾರೆ. ಅವರ ನಡೆ ಇಂದಿನ ನೂರಾರು ರಾಜಕಾರಣಿಗಳಿಗೆ ಮಾದರಿಯಾಗಿದೆ. ಇಂತಹ ಅವರು ಸಾಗರ ತಾಲ್ಲೂಕು ಬಂಟರ ಸಂಘಕ್ಕೆ ಭೇಟಿ ನೀಡಿ, ನೂತನವಾಗಿ ನಿರ್ಮಾಣ ಮಾಡುತ್ತಿರುವಂತ ಸಮುದಾಯ ಭವನ ವೀಕ್ಷಣೆ ಮಾಡಿದ್ದು ನಮ್ಮೆಲ್ಲರ ಪುಣ್ಯವೆಂದರು.
ಸಾಗರ ತಾಲ್ಲೂಕು ಶಾಸಕ ಗೋಪಾಲಕೃಷ್ಣ ಬೇಳೂರು ಜನಮೆಚ್ಚಿದ ನಾಯಕರು. ವಿವಿಧ ಸಮುದಾಯಗಳ ಏಳಿಗೆಗಾಗಿ ಶ್ರಮಿಸುತ್ತಿರುವಂತ ಧೀಮಂತರ ಜನಾನುರಾಗಿಯಾಗಿದ್ದಾರೆ. ಸಾಗರದ ವಿವಿಧ ಸಮುದಾಯಕ್ಕೆ ಅನುದಾನ ಒದಗಿಸಿಕೊಡುವಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಕಾರಣೀಭೂತರಾಗಿದ್ದಾರೆ ಎಂಬುದಾಗಿ ಹೇಳುವ ಮೂಲಕ ಶಾಸಕರನ್ನು ಅಭಿನಂದಿಸಿದರು.
ಸಾಗರದ ಬಂಟರ ಸಂಘದ ಸಮುದಾಯ ಭವನವು 5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಶೇ.25ರಷ್ಟು ಕೆಲಸ ಬಾಕಿ ಇದೆ. ಇದಕ್ಕೆ ಸರ್ಕಾರದಿಂದ ಆರ್ಥಿಕ ಅನುದಾನ ಕೊಡಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಾಗರ ತಾಲ್ಲೂಕು ಬಂಟರ ಸಂಘದಿಂದ ನೂತನವಾಗಿ ನಿರ್ಮಿಸುತ್ತಿರುವಂತ ಸಮುದಾಯ ಭವನದ ನಿರ್ಮಾಣಕ್ಕೆ ಸರ್ಕಾರದಿಂದ ಆರ್ಥಿಕ ನೆರವಿಗಾಗಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಂಘದ ಪಾಧಿಕಾರಿಗಳು ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ಉಪಾಧ್ಯಕ್ಷ ರಘುಪತಿ ಶೆಟ್ಟಿ, ಖಜಾಂಚಿ ಅಣ್ಣಪ್ಪ ಶೆಟ್ಟಿ, ಸಹ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ರಮೇಶ್ ಹೆಗಡೆ, ಸದಾನಂದ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಸತೀಶ್ ಶೆಟ್ಟಿ, ಸುರೇಶ್ ಶೆಟ್ಟಿ ಹೊಸೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ