ಬೆಳಗಾವಿ: ವಿಶ್ವಜ್ಯೋತಿ ಬಸವಣ್ಣನವರ ವಿಚಾರಗಳನ್ನು, ವಿಶ್ವಕ್ಕೆ ಅವರು ನೀಡಿರುವ ಆದರ್ಶಗಳನ್ನು ಇಂದಿನ-ಮುಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿಧೇಯಕ ನಿರ್ಮಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಬುಧವಾರ ವಿಧಾನ ಪರಿಷತ್‌ನಲ್ಲಿ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಮಂಡಿಸಿ ಮಾತನಾಡಿದ ಅವರು, “ಕೂಡಲೇ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಜೊತೆಯಲ್ಲೇ, ಬಸವನ ಬಾಗೇವಾಡಿಯ ಅಭಿವೃದ್ಧಿಯನ್ನೂ ಕೈಗೊಳ್ಳಲಾಗುತ್ತಿತ್ತು. ಆದರೆ, ನಾಡಿನ ಸಾಹಿತ್ಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಚ್ಚಳಿಯದ ಕೊಡುಗೆ ನೀಡಿರುವ ಬಸವನ ಬಾಗೇವಾಡಿ ಇತಿಹಾಸವನ್ನು ಜನರಿಗೆ ತಿಳಿಸಲು ಹಾಗೂ ಮುಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ತಲುಪಿಸುವ ದೃಷ್ಠಿಯಿಂದ ಪ್ರತ್ಯೇಕ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿಧೇಯಕ ಮಂಡಿಸಲಾಗಿದೆ” ಎಂದರು.
ಮುಂದುವರೆದು, “ಬಸವನ ಬಾಗೇವಾಡಿ ಐತಿಹಾಸಿಕ ಹಿನ್ನೆಲೆ ಇರುವ ಪ್ರದೇಶ. ಹೀಗಾಗಿ ಈ ಪ್ರದೇಶದ ಅಭಿವೃದ್ಧಿಗೂ ಒಂದು ಪ್ರಾಧಿಕಾರ ರಚಿಸಬೇಕು ಎಂದು ಸದನದ ಅನೇಕ ಸದಸ್ಯರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಅವರ ಒತ್ತಾಯ ಹಾಗೂ ನಮ್ಮ ಶ್ರೀಮಂತ ಇತಿಹಾಸವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಪ್ರಾಧಿಕಾರ ರಚಿಸಲಾಗಿದೆ. ಮೊದಮೊದಲು ಕನ್ನಡ ಸಂಸ್ಕೃತಿ ಇಲಾಖೆ ಆಯೋಗದಲ್ಲಿ ಈ ಪ್ರಾಧಿಕಾರದ ರಚನೆ ಸಂಬಂಧಿಸಿದ ಘೋಷಿಸಲಾಗಿತ್ತು. ಆದರೆ, ಪ್ರಾಧಿಕಾರ ಕಂದಾಯ ಇಲಾಖೆ ಅಡಿಯಲ್ಲಿ ಬರುವ ಕಾರಣ ಈ ಜವಾಬ್ದಾರಿಯನ್ನು ನಮಗೆ ವಹಿಸಲಾಗಿದೆ” ಎಂದರು.
“ಪ್ರಾಧಿಕಾರ ರಚನೆ ಸಂಬಂಧಿಸಿ ಕಳೆದ ಒಂದು ವರ್ಷದಿಂದ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಈಗಾಗಲೇ ನಮ್ಮಲ್ಲಿ ಸರ್ವಜ್ಞ, ಕೆಂಪೇಗೌಡ ಸೇರಿದಂತೆ ಹತ್ತಾರು ಪ್ರಾಧಿಕಾರಗಳಿದ್ದು, ಆ ಪ್ರಾಧಿಕಾರಗಳ ಕಾನೂನುಗಳನ್ನೇ ಆಧರಿಸಿ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಈ ಪ್ರಾಧಿಕಾರದ ರಚನೆಯಿಂದ ಇಲ್ಲಿನ ಇತಿಹಾಸವನ್ನು ಜನರಿಗೆ ತಲುಪಿಸುವ ಜೊತೆಗೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ” ಎಂದು ಅಭಿಪ್ರಾಯಪಟ್ಟರು.
ವಿಧಾನ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದ್ದ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ಸಭಾಧ್ಯಕ್ಷರಾದ ಬಸವರಾಜ ಹೊರಟ್ಟಿಯವರು ಪರಿಷತ್‌ನಲ್ಲೂ ಮತಕ್ಕೆ ಹಾಕಿದರು. ವಿಧೇಯಕವು ಪರಿಷತ್‌ನಲ್ಲೂ ಸರ್ವಾನುಮತದಿಂದ ಅಂಗೀಕಾರಗೊಂಡಿತು.
BREAKING: ವಿಧಾನ ಪರಿಷತ್ತಿನಲ್ಲೂ 2024ನೇ ಸಾಲಿನ ಬೃಹತ್ ಬೆಂಗಳೂರು ನಗರ ಪಾಲಿಕೆ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರ
ALERT : ಮೊಬೈಲ್ ಬಳಕೆದಾರರೇ ಎಚ್ಚರ : ಈ ಚಿಹ್ನೆಗಳು ಕಂಡರೆ ನಿಮ್ಮ `ಫೋನ್ ಹ್ಯಾಕ್ ಆಗಿದೆ ಎಂದರ್ಥ.!