ಬೆಂಗಳೂರು : : ಐದು ದಿನಗಳ ಕೆಲಸದ ವಾರವನ್ನು ತಕ್ಷಣ ಜಾರಿಗೆ ತರುವಂತೆ ಒತ್ತಾಯಿಸಲು ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ದು, ಮಂಗಳವಾರ ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳ ಬ್ಯಾಂಕಿಂಗ್ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ.
ಹೌದು, ವಾರದಲ್ಲಿ 5 ದಿನಮಾತ್ರ ಕೆಲಸನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಸಾರ್ವಜನಿಕ ವಲಯದ ಬ್ಯಾಂಕ್ ಸಿಬ್ಬಂದಿ ಮಂಗಳವಾರ ಕರೆ ನೀಡಿದ್ದ ಅಖಿಲ ಭಾರತ ಮುಷ್ಕರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬ್ಯಾಂಕ್ ವಹಿವಾಟು ಸಂಪೂರ್ಣ ಸ್ತಬ್ಧವಾಗಿದ್ದು, ಗ್ರಾಹಕರು ಹಣ ಸಿಗದೇ ಪರದಾಡಿದ್ದಾರೆ.
ಜ.24ರಂದು 4ನೇ ಶನಿವಾರ, ಜ.25 ಭಾನುವಾರ, ಜ.26ರಂದು ಗಣರಾಜ್ಯೋ ತ್ಸವದ ಹಿನ್ನೆಲೆಯಲ್ಲಿ 3 ದಿನ ನಿರಂತರ ವಾಗಿ ಬ್ಯಾಂಕ್‌ಗೆ ಸರ್ಕಾರಿ ರಜೆ ಇತ್ತು.
ಮಂಗಳವಾರ ಬ್ಯಾಂಕ್ ಸಿಬ್ಬಂದಿ ಮುಷ್ಕರ ನಡೆಸಿದ್ದರಿಂದಾಗಿ ಸತತ 4 ದಿನ ಬ್ಯಾಂಕ್ ವಹಿವಾಟು ನಡೆಯಲಿಲ್ಲ. ಇದರಿಂದಾಗಿ ಶಾಖಾ ಮಟ್ಟದಲ್ಲಿ ನಡೆಯುತ್ತಿದ್ದ ಎಲ್ಲ ವ್ಯವಹಾರಗಳೂ ಸ್ಥಗಿತವಾಗಿದ್ದವು. ಬ್ಯಾಂಕ್ ಶಾಖೆಗಳಲ್ಲಿ ಚೆಕ್ ಕ್ಲಿಯರೆನ್ಸ್, ಹಣ ವಿತ್‌ಡ್ರಾ, ಡೆಪಾಸಿಟ್, ಪಾಸ್‌ಬುಕ್ ಎಂಟ್ರಿ ಮತ್ತಿತರ ಕಾರ್ಯಗಳಿಲ್ಲದೇ ಗ್ರಾಹಕರು ಸಂಕಷ್ಟ ಅನುಭವಿಸಬೇಕಾಯಿತು. 4 ದಿನ ರಜೆ ಇದ್ದುದರಿಂದ ಕೆಲವೆಡೆ ಎಟಿಎಂಗಳಲ್ಲೂ ಹಣದ ಕೊರತೆ ಕಂಡು ಬಂದಿದ್ದು ಸಾರ್ವಜನಿಕರು ಪರದಾಡುವಂತಾಯಿತು.
ಎಲ್ಲಾ ಶನಿವಾರಗಳನ್ನು ರಜಾದಿನಗಳಾಗಿ ಘೋಷಿಸಬೇಕೆಂದು ಒಕ್ಕೂಟಗಳು ಒತ್ತಾಯಿಸುತ್ತಿವೆ, ಇದು ಮಾರ್ಚ್ 2024 ರಲ್ಲಿ ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ನೊಂದಿಗೆ ಸಹಿ ಹಾಕಿದ 12 ನೇ ದ್ವಿಪಕ್ಷೀಯ ಒಪ್ಪಂದದ ಸಮಯದಲ್ಲಿ ಒಪ್ಪಿಕೊಂಡ ಪ್ರಮುಖ ಅಂಶವಾಗಿದೆ ಎಂದು ವರದಿಯಾಗಿದೆ ಆದರೆ ಸರ್ಕಾರದ ಅಧಿಸೂಚನೆಗಾಗಿ ಕಾಯುತ್ತಿದೆ. ಪ್ರಸ್ತುತ, ಪ್ರತಿ ತಿಂಗಳ ಮೊದಲ, ಮೂರನೇ ಮತ್ತು ಐದನೇ ಶನಿವಾರ ಬ್ಯಾಂಕುಗಳು ತೆರೆದಿರುತ್ತವೆ.








