ನವದೆಹಲಿ : ಏಪ್ರಿಲ್ 1, 2026 ರಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಬ್ಯಾಂಕುಗಳು ಎಟಿಎಂ (ATM) ಬಳಕೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ. ನಗದು ಹಿಂತೆಗೆತದ ಮಿತಿ, ವಹಿವಾಟು ಶುಲ್ಕ ಹಾಗೂ ನಗದು ಪಡೆಯುವ ವಿಧಾನಗಳಲ್ಲಿ ಈ ಬದಲಾವಣೆಗಳು ಕಂಡುಬರಲಿವೆ.
ಹೆಚ್ಡಿಎಫ್ಸಿ (HDFC) ಬ್ಯಾಂಕ್: ಯುಪಿಐ ವಿತ್ಡ್ರಾವಲ್ ಮೇಲೆ ಕಣ್ಣು
ಖಾಸಗಿ ವಲಯದ ದೈತ್ಯ ಹೆಚ್ಡಿಎಫ್ಸಿ ಬ್ಯಾಂಕ್ ತನ್ನ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಇನ್ಮುಂದೆ ಎಟಿಎಂಗಳಲ್ಲಿ ಯುಪಿಐ (UPI) ಮೂಲಕ ಮಾಡುವ ನಗದು ಹಿಂತೆಗೆತಗಳನ್ನು ಸಹ ತಿಂಗಳ ಉಚಿತ ವಹಿವಾಟಿನ ಮಿತಿಯಲ್ಲೇ ಸೇರಿಸಲಾಗುತ್ತದೆ.
ಹೆಚ್ಚುವರಿ ಶುಲ್ಕ: ನಿಗದಿತ ಉಚಿತ ಮಿತಿ ಮೀರಿದ ನಂತರ ಪ್ರತಿ ವಹಿವಾಟಿಗೆ 23 ರೂ. ಶುಲ್ಕ (ತೆರಿಗೆ ಹೊರತುಪಡಿಸಿ) ವಿಧಿಸಲಾಗುತ್ತದೆ.
ಪ್ರಸ್ತುತ ಮಿತಿ: ಹೆಚ್ಡಿಎಫ್ಸಿ ಎಟಿಎಂಗಳಲ್ಲಿ ತಿಂಗಳಿಗೆ 5 ಉಚಿತ ವಹಿವಾಟುಗಳು ಲಭ್ಯವಿವೆ. ಇತರ ಬ್ಯಾಂಕ್ಗಳ ಎಟಿಎಂಗಳಲ್ಲಿ ಮೆಟ್ರೋ ನಗರಗಳಲ್ಲಿ 3 ಮತ್ತು ಉಳಿದ ಕಡೆ 5 ಉಚಿತ ವಹಿವಾಟುಗಳ ಅವಕಾಶವಿದೆ.
ಪಿಎನ್ಬಿ (PNB): ನಗದು ಹಿಂಪಡೆಯುವ ಮಿತಿಯಲ್ಲಿ ಬದಲಾವಣೆ
ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಯ್ದ ಡೆಬಿಟ್ ಕಾರ್ಡ್ಗಳ ದಿನನಿತ್ಯದ ನಗದು ಹಿಂಪಡೆಯುವ ಮಿತಿಯನ್ನು ಪರಿಷ್ಕರಿಸಿದೆ.
ಹೊಸ ಮಿತಿ: ಕಾರ್ಡ್ನ ಪ್ರಕಾರಕ್ಕೆ ಅನುಗುಣವಾಗಿ ಇನ್ಮುಂದೆ ದಿನಕ್ಕೆ 50,000 ರೂ. ನಿಂದ 75,000 ರೂ. ವರೆಗೆ ಮಾತ್ರ ವಿತ್ಡ್ರಾ ಮಾಡಬಹುದು.
ಹಿಂದೆ ಕೆಲವು ಕಾರ್ಡ್ಗಳಿಗೆ 1 ಲಕ್ಷದವರೆಗೆ ಇದ್ದ ಮಿತಿಯನ್ನು ಈಗ ಕಡಿಮೆ ಮಾಡಲಾಗಿದ್ದು, ವಹಿವಾಟಿನ ಭದ್ರತೆ ಮತ್ತು ರಿಸ್ಕ್ ಮ್ಯಾನೇಜ್ಮೆಂಟ್ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಜಿಯೋ ಪೇಮೆಂಟ್ಸ್ ಬ್ಯಾಂಕ್: ಕ್ಯೂಆರ್ ಕೋಡ್ ಮೂಲಕ ನಗದು
ಜಿಯೋ ಪೇಮೆಂಟ್ಸ್ ಬ್ಯಾಂಕ್ ಹೊಸ ಮಾದರಿಯ ಕ್ಯೂಆರ್ ಕೋಡ್ ಆಧಾರಿತ ನಗದು ಹಿಂಪಡೆಯುವ ಸೌಲಭ್ಯವನ್ನು ಪರಿಚಯಿಸಿದೆ. ಗ್ರಾಹಕರು ಬ್ಯಾಂಕಿಂಗ್ ಕರೆಸ್ಪಾಂಡೆಂಟ್ಗಳ ಬಳಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಯುಪಿಐ ಆಪ್ ಮೂಲಕ ಹಣವನ್ನು ಸುಲಭವಾಗಿ ಪಡೆಯಬಹುದು.








