ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಡಿಸೆಂಬರ್ 31ರ ರಾತ್ರಿ 1ರ ವರೆಗೆ ಸಾರ್ವತ್ರಿಕವಾಗಿ ಹೊಸ ವರ್ಷ ಆಚರಿಸಲು ಅನುಮತಿಯಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರಾದ ಬಿ.ದಯಾನಂದ್ ಅವರು ತಿಳಿಸಿದ್ದಾರೆ.
ಹೊಸ ವರ್ಷಾಚರಣೆಯ ಪ್ರಯುಕ್ತ ಡಿಸೆಂಬರ್ 31 ರಂದು ರಾತ್ರಿ 11 ರಿಂದ ಮಧ್ಯರಾತ್ರಿ 2 ಗಂಟೆಯವರೆಗೆ ವಿವಿಧ ಮಾರ್ಗಗಳಲ್ಲಿ ಹೆಚ್ಚುವರಿ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ.
ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಜಿಗಣಿಗೆ, ಎಂ.ಜಿ. ರಸ್ತೆಯಿಂದ ಸರ್ಜಾಪುರ, ಕೆಂಗೇರಿ–ಕೆಎಚ್‌ಬಿ ಕ್ವಾರ್ಟರ್ಸ್, ಜನಪ್ರಿಯ ಟೌನ್‌ಶಿಪ್, ನೆಲಮಂಗಲ, ಯಲಹಂಕ ಉಪನಗರ 5ನೇ ಹಂತ, ಯಲಹಂಕ, ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿಗೆ ಹೆಚ್ಚುವರಿ ಬಸ್ ಸಂಚರಿಸಲಿವೆ.
ಹೆಚ್ಚು ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ, ಜಂಕ್ಷನ್‌ಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್. ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್‌ಗಳಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಇರಲಿದೆ.