ಬೆಂಗಳೂರು: ನಾಳೆ ಸಿಎ ಪರೀಕ್ಷೆ ನಡೆಸಲು ನಿಗದಿ ಪಡಿಸಲಾಗಿದೆ. ಇದೇ ಸಮಯಕ್ಕೆ ಇಂದು ದಿಢೀರ್ ಬೆಂಗಳೂರು ವಿವಿಯಿಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟ ಎನ್ನುವಂತೆ ನಾಳೆ ಬಿಕಾಂ ಪರೀಕ್ಷೆಯನ್ನು ಇರಿಸಲಾಗಿದೆ. ಇದೀಗ ನಾಳೆ ಸಿಎ ಪರೀಕ್ಷೆ ಬರೆಯೋದೋ ಅಥವಾ ಬಿಕಾಂ ಪರೀಕ್ಷೆ ಬರೆಯೋದೋ ಎನ್ನುವ ಆತಂಕದಲ್ಲಿ ವಿದ್ಯಾರ್ಥಿಗಳನ್ನು ದೂಡಲಾಗಿದೆ.
ಈ ಕುರಿತಂತೆ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಅವರ ಪೋಸ್ಟ್ ಸಾರಾಂಶ ಈ ಕೆಳಕಂಡಂತಿದೆ.
ನನ್ನ ಮನೆಗೆ ಇಂದು ಸಂಜೆ ಓರ್ವ ಫಸ್ಟ್ ಬಿಕಾಂ ವಿದ್ಯಾರ್ಥಿನಿ ತನ್ನ ತಂದೆಯ ಜೊತೆ ಬಂದಿದ್ದರು. ನಾಳೆ ಬೆಳಗ್ಗೆ (16.1.2025, ಗುರುವಾರ) 9.30 ಗಂಟೆಗೆ ಅವರಿಗೆ ಮೊದಲನೇ ಬಿಕಾಂ ನ ಪರೀಕ್ಷೆ ನಿಗದಿಯಾಗಿತ್ತು. ಆಕೆ ಸಿಎ ಶಿಕ್ಷಣವನ್ನು ಸಹ ಪಡೆಯುತ್ತಿರುವುದರಿಂದ, ಸಿಎ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದೆ.
ಆದರೆ ಇಂದು ಸಂಜೆ 4:30ಗೆ ಆಕೆಯ ಮೊಬೈಲ್ ಗೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದಿಂದ ಈ ಕೆಳಕಂಡ ಮೆಸೇಜ್ ಬಂದು “ನಾಳೆ ಬೆಳಗ್ಗೆ ಒಂಬತ್ತು ಗಂಟೆಗೆ ನಿಗದಿಯಾಗಿದ್ದ ಪರೀಕ್ಷೆಯನ್ನು ನಾಳೆ ಮಧ್ಯಾಹ್ನ 2.00 ಗಂಟೆಗೆ (ಧಿಡೀರನೆ ಯಾವುದೇ ಕಾರಣವನ್ನೂ ನೀಡದೆ) ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.
ವಿದ್ಯಾರ್ಥಿನಿ ಮತ್ತು ತಂದೆ ಗಾಬರಿಯಿಂದ ನನ್ನ ಬಳಿ ಬಂದರು. ನಾನು ತಕ್ಷಣ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಎಂಸಿ ಸುಧಾಕರ್ ಜೊತೆಗೆ ಮಾತನಾಡಿ ಈ ಗೊಂದಲವನ್ನು ವಿದ್ಯಾರ್ಥಿಗಳ ದೃಷ್ಟಿಯಿಂದ ಪರಿಹರಿಸಬೇಕೆಂದು ಕೋರಿಕೊಂಡೆ.
ಅವರು ದೆಹಲಿಯಲ್ಲಿದ್ದಿದ್ದರಿಂದ ಅವರ ಆಪ್ತ ಕಾರ್ಯದರ್ಶಿ ನನ್ನ ಜೊತೆ ಮಾತನಾಡಿ ಯುನಿವರ್ಸಿಟಿಯ ಕುಲಸಚಿವರೊಂದಿಗೆ ಕಾನ್ಫರೆನ್ಸ್ ಕಾಲ್ ತೆಗೆದುಕೊಂಡರು.
ಕುಲಸಚಿವರು ತಮ್ಮದೇ ಆದ ರೀತಿಯಲ್ಲಿ ನಾಳೆ ಬೆಳಗ್ಗೆ ಪರೀಕ್ಷೆಯ ಮುಂದೂಡಿಕೆ ಅವಶ್ಯಕವೆಂದು ವಾದಿಸಿದರು. ಹಾಗಾದರೆ ಈ ವಿದ್ಯಾರ್ಥಿನಿ ಮತ್ತು ಇಂತಹ ಹಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು ನಾಳೆ ಒಂದೇ ಸಮಯದಲ್ಲಿ ನಡೆಯಲಿರುವ ಯಾವ ಪರೀಕ್ಷೆಯನ್ನು ತೆಗೆದುಕೊಳೋದು ಎಂಬುದಾಗಿ ಪ್ರಶ್ನಿಸಿದ್ದಾರೆ.
ಒಟ್ಟಾರೆಯಾಗಿ ಬೆಂಗಳೂರು ವಿವಿಯಿಂದ ಇಂದು ಮಧ್ಯಾಹ್ನ ದಿಢೀರ್ ನಾಳೆ 9 ಗಂಟೆಗೆ ನಿಗದಿಯಾಗಿದ್ದಂತ ಬಿಕಾಂ ಪರೀಕ್ಷೆಯನ್ನು ಸಿಎ ಪರೀಕ್ಷೆಯ ಮಧ್ಯಾಹ್ನ 2 ಗಂಟೆಯ ಸಮಯಕ್ಕೇ ಬದಲಾವಣೆ ಮಾಡಿ ಮಹಾ ಎಡವಟ್ಟು ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಆ ಮೂಲಕ ಗೊಂದಲಕ್ಕೆ ದೂಡಿ, ಭವಿಷ್ಯದ ಜೊತೆಗೆ ಚೆಲ್ಲಾಟ ಆಡುವಂತ ಕೆಲಸ ಮಾಡಿದೆ. ಈ ಕೂಡಲೇ ನಾಳೆಯ ಪರೀಕ್ಷೆಯ ಸಮಯವನ್ನು ಬದಲಾವಣೆ ಮಾಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
BREAKING: ರಾಜ್ಯ ಸರ್ಕಾರದಿಂದ ಖಾಸಗಿ ಅನುದಾನಿತ ಪ್ರೌಢ ಶಾಲೆಗಳಲ್ಲಿನ ಬೋಧಕರ ಖಾಲಿ ಹುದ್ದೆ ಭರ್ತಿಗೆ ಗ್ರೀನ್ ಸಿಗ್ನಲ್
ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ