ಬೆಂಗಳೂರು : ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಇಲಾಖೆಯು ಸ್ಟಾರ್ಟಪ್ ಗಳು ಹಾಗೂ ಜಾಗತಿಕ ಬಂಡವಾಳದಾರರನ್ನು ಒಂದೇ ವೇದಿಕೆಯಡಿ ತರುವ ಸದುದ್ದೇಶದಿಂದ ನವೆಂಬರ್ 19 ರಿಂದ 21 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ “ಬೆಂಗಳೂರು ಟೆಕ್ ಸಮ್ಮಿಟ್” (ಬಿಟಿಎಸ್ – 2024) ಅನ್ನು ಆಯೋಜಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಪ್ರತಿಷ್ಠಿತ ಕಂಪನಿಗಳು, ಬಂಡವಾಳ ಸಂಸ್ಥೆಗಳು ಸೇರಿ 50 ಕ್ಕೂ ಹೆಚ್ಚು ಜಾಗತಿಕ ಹೂಡಿಕೆದಾರರು, ಜಾಗತಿಕ ನಿಯೋಗದ ಸದಸ್ಯರು ಈ ಸಮ್ಮಿಟ್’ನಲ್ಲಿ ಭಾಗವಹಿಸಲಿದ್ದಾರೆ. ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ ಡಮ್, ಫ್ರಾನ್ಸ್, ಆಸ್ಟ್ರಿಯಾ, ಐರೋಪ್ಯ ಒಕ್ಕೂಟ, ಡೆನ್ಮಾರ್ಕ್, ಫಿನ್ಲ್ಯಾಂಡ್, ಪೋಲೆಂಡ್, ಜಪಾನ್, ಜರ್ಮನಿ, ಸ್ವಿಟ್ಜರ್ಲೆಂಡ್, ಇಸ್ರೇಲ್ ಮತ್ತು ಅಮೆರಿಕ ಸೇರಿದಂತೆ 15 ಕ್ಕೂ ಹೆಚ್ಚು ದೇಶಗಳ ನಿಯೋಗಗಳು ಬಿಟಿಎಸ್ 2024 ನಲ್ಲಿ ಪಾಲ್ಗೊಳ್ಳುತ್ತಿವೆ.
ಸ್ಟಾರ್ಟಪ್‌ಗಳ ಅಭಿವೃದ್ಧಿಗಾಗಿ ‘ ಬೆಂಗಳೂರು ಟೆಕ್ ಸಮ್ಮಿಟ್ – 2024
➧ ನವೆಂಬರ್ 19 ರಿಂದ 21 ರವರೆಗೆ ಬೆಂಗಳೂರು ಟೆಕ್ ಸಮ್ಮಿಟ್ ಆಯೋಜನೆ
➧ 118 ಸ್ಟಾರ್ಟಪ್’ಗಳು ಹಾಗೂ 50 ಜಾಗತಿಕ ಹೂಡಿಕೆದಾರರನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನ
➧ ಬಿಟಿಎಸ್ – 2024 ರಲ್ಲಿ ಆಸ್ಟ್ರೇಲಿಯಾ, ಯುಕೆ, ಫ್ರಾನ್ಸ್, ಆಸ್ಟ್ರಿಯಾ, ಇಯು, ಡೆನ್ಮಾರ್ಕ್ ಸೇರಿ 50ಕ್ಕೂ ಹೆಚ್ಚು ಜಾಗತಿಕ ನಿಯೋಗ ಭಾಗಿ
ನಾವಿನ್ಯತೆ, ಆವಿಷ್ಕಾರ ಕ್ಷೇತ್ರದಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿದೆ. ಈ ಶೃಂಗಸಭೆ ಮೂಲಕ ನಮ್ಮ ರಾಜ್ಯದ ಸ್ಟಾರ್ಟಪ್ ಗಳು ಮತ್ತು ಜಾಗತಿಕ ಹೂಡಿಕೆದಾರರ ನಡುವೆ ನೇರ ಸಂಪರ್ಕ ಕಲ್ಪಿಸಲಾಗುತ್ತಿದೆ. 3 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಟಾರ್ಟಪ್’ಗಳ ಸರ್ವತೋಮುಖ ಅಭಿವೃದ್ಧಿ ಕುರಿತ ಜಾಗತಿಕ ಮಟ್ಟದ ತಜ್ಞರಿಂದ ವಿಶೇಷ ಚರ್ಚೆಗಳು, ಸಮಾಲೋಚನೆ ಸಭೆ, ಕಾರ್ಯಾಗಾರಗಳು ನಡೆಯಲಿವೆ.
ನವೋದ್ಯಮಿಗಳಿಗೆ ನವೀನ ತಂತ್ರಜ್ಞಾನಗಳ ಬಗ್ಗೆ ಮಾರ್ಗದರ್ಶನದ ಜೊತೆಗೆ ಉತ್ತಮ ಸ್ಟಾರ್ಟಪ್ ಗಳಿಗೆ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ.