ಬೆಂಗಳೂರು: ನಗರದಲ್ಲಿ ಹಾಡಹಗಲೇ 7.11 ಕೋಟಿ ರೂಪಾಯಿ ದರೋಡೆ ಮಾಡಿದಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಪೊಲೀಸ್ ಪೇದೆ ಸೇರಿದಂತೆ ಬಹುತೇಕ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ 7.11 ಕೋಟಿ ರೂಪಾಯಿಗಳಲ್ಲಿ 6 ಕೋಟಿಗೂ ಹೆಚ್ಚು ಹಣವನ್ನು ಜಪ್ತಿ ಮಾಡಿದ್ದಾರೆ.
ಕಳೆದ ನವೆಂಬರ್.19ರಂದು ಡೈರಿ ಸರ್ಕಲ್ ಬಳಿಯಲ್ಲಿ ಎಟಿಎಂಗೆ ಹಣ ತುಂಬಲು ಕೊಂಡೊಯ್ಯುತ್ತಿದ್ದಂತ ವಾಹನ ತಡೆದು, ಆರ್ ಬಿ ಐ ಅಧಿಕಾರಿಗಳು ಎಂಬುದಾಗಿ ಹೇಳಿ 7.11 ಕೋಟಿ ದರೋಡೆ ಮಾಡಲಾಗಿತ್ತು. ಹಾಡ ಹಗಲೇ ನಡೆದಿದ್ದಂತ ಈ ಘಟನೆಯಿಂದ ರಾಜಧಾನಿ ಬೆಂಗಳೂರಿನ ಜನತೆ ಬೆಚ್ಚಿ ಬಿದ್ದಿದ್ದರು.
ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇತರೆ ತಾಂತ್ರಿಕ ಮಾಹಿತಿ ಆಧರಿಸಿ ಮೊದಲು ವಾಹನ ಪತ್ತೆ ಹಚ್ಚಿದ್ದರು. ಆ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆಂಧ್ರದಲ್ಲಿ ಬಂಧಿತ ಆರೋಪಿಗಳಿಂದ 5.3 ಕೋಟಿ ಹಣವನ್ನು ಪೊಲೀಸರು ವಶಕ್ಕೂ ಪಡೆದಿದ್ದರು.
ಇದಲ್ಲದೇ ಚಿತ್ತೂರಿನ ಅರಣ್ಯ ಪ್ರದೇಶದಲ್ಲಿ ಚೇಸ್ ನಡೆಸಿದಂತ ಬೆಂಗಳೂರು ಪೊಲೀಸರು ಪ್ರಮುಖ ಆರೋಪಿ ಕ್ಷೇವಿಯರ್ ನನ್ನು ತಮಿಳುನಾಡಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದಲ್ಲದೇ ಪ್ರಮುಖ ಆರೋಪಿ ರವಿಯನ್ನು ಬಂಧಿಸಲಾಗಿತ್ತು. ಈತ ಆಂಧ್ರಪ್ರದೇಶದ ಚಿತ್ತೂರಿನ ನಿವಾಸಿಯಾಗಿದ್ದನು. ಈತನ ಪೊಲೀಸ್ ಪೇದೆ ಅಣ್ಣಪ್ಪ ಜೊತೆಗೆ ನಿರಂತರ ಸಂಪರ್ಕ ಹೊಂದಿದ್ದನು.
ಒಟ್ಟಾರೆಯಾಗಿ ಬೆಂಗಳೂರಲ್ಲಿ ಹಾಡ ಹಗಲೇ ನಡೆದಿದ್ದಂತ 7.11 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರವಿ, ಪೊಲೀಸ್ ವೇದೆ ಅಣ್ಣಪ್ಪ, ಕ್ಷೇವಿಯರ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದಂತೆ ಆಗಿದೆ.








