ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಯ ಮೇಲೆ ಕಾಂಗ್ರೆಸ್ ಸರ್ಕಾರವು ತೆರಿಗೆ ರಾಜ್ ಪದ್ಧತಿ ಹೇರುತ್ತಿದ್ದು, ಸುಮಾರು 1000 % ಹೆಚ್ಚಿನ ತೆರಿಗೆಯನ್ನು ಜನರ ಮೇಲೆ ವಿಧಿಸುತ್ತಿದೆ ಎಂದು ಜೆಡಿಎಸ್ ನಗರ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ ಅವರು ಗಂಭೀರ ಆರೋಪ ಮಾಡಿದರು.
ಅಲ್ಲದೆ ʼಬಿʼ ಖಾತಾದಿಂದ ʼಎʼ ಖಾತಾಗೆ ಬದಲಾವಣೆ ಎನ್ನುವುದೇ ದೊಡ್ಡ ಬೋಗಸ್ ಎಂದಿರುವ ಅವರು, ನ್ಯಾಯಾಲಯಕ್ಕೆ ಹೋದರೆ ಸರಕಾರಕ್ಕೆ ಛೀಮಾರಿ ಹಾಕುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಪಕ್ಷದ ಹಿರಿಯ ನಾಯಕ ಕೆ.ಎ. ತಿಪ್ಪೇಸ್ವಾಮಿ ಇನ್ನಿತರೆ ನಾಯಕರೊಂದಿಗೆ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು; ಗ್ರೆಟರ್ ಬೆಂಗಳೂರು ಹೆಸರಿನಲ್ಲಿ ನಗರದಲ್ಲಿ ತೆರಿಗೆ ರಾಜ್ ಸೃಷ್ಟಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ತೆರಿಗೆ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಬೆಂಗಳೂರು ನಗರದ ಜನರನ್ನು ಕೊಳ್ಳೆ ಹೊಡೆಯುತ್ತಿದೆ. ಈ ಲೂಟಿ ವಿರುದ್ಧ ನಮ್ಮ ಪಕ್ಷ ಕಾನೂನಾತ್ಮಕ ಹೋರಾಟ ಸೇರಿ ಎಲ್ಲ ರೀತಿಯ ಹೋರಾಟಗಳನ್ನೂ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಹಿಂದೆ ಒಂದು ಚದರ ಮೀಟರಿಗೆ 13,800 ರೂಪಾಯಿ ತೆರಿಗೆಯನ್ನು ಬಿಬಿಎಂಪಿ ವಿಧಿಸುತ್ತಿತ್ತು. ಈ ತೆರಿಗೆ ಪ್ರಮಾಣವನ್ನು ರಾಜ್ಯ ಕಾಂಗ್ರೆಸ್ ಸರಕಾರ ಸರಾಸರಿ 1000% ಏರಿಕೆ ಮಾಡಿದ್ದು; ಅಂದರೆ 3ರಿಂದ 6 ಲಕ್ಷ ರೂಪಾಯಿವರೆಗೂ ಹೆಚ್ಚಿಸಿದೆ. ಇದು ಅತ್ಯಂತ ಹೇಯ, ಅಕ್ಷಮ್ಯ ಎಂದು ಅವರು ದಾಖಲೆಗಳ ಸಮೇತ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
2007ರಲ್ಲಿ ಬಿಬಿಎಂಪಿಗೆ ಹೊಸದಾಗಿ ಸೇರಿರುವ ಪ್ರದೇಶಗಳ ಕಂದಾಯ ನಿವೇಶನಗಳಿಗೆ ಚದರ್ ಮೀಟರಿಗೆ 250 ರೂಪಾಯಿ ಇತ್ತು. ಇದು ಹಳೆಯ 100 ವಾರ್ಡ್ʼಗಳಿಗೆ ಕಂದಾಯ ನಿವೇಶನಗಳು, ಕಟ್ಟಡಗಳಿಗೆ ಖಾತೆ ಮಾಡಿ ಕೊಡಲಾಗುತ್ತಿತ್ತು. ಈಗ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಒಂದು ಚದರ ಅಡಿಗೆ 250ರಿಂದ 500 ರೂಪಾಯಿ ಆಗಲಿದೆ. ವೈಜ್ಞಾನಿಕವಾಗಿ ತೆರಿಗೆ ವಿಧಿಸುತ್ತಿದೆ. ಸರಕಾರ ಕಣ್ಮುಚ್ಚಿಕೊಂಡು ಆದೇಶ ಮಾಡಿದೆ ಎಂದು ರಮೇಶ್ ಗೌಡ ಆರೋಪ ಮಾಡಿದರು.
ಗ್ರೆಟರ್ ಬೆಂಗಳೂರು ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ʼಎʼ ಹಾಗೂ ʼಬಿʼ ಖಾತೆ ನೀಡುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಎರಡು ವರ್ಷ ಪೂರೈಸಿದರು ಕಾಂಗ್ರೆಸ್ ಸರ್ಕಾರ ಬೆಂಗಳೂರು ಅಭಿವೃದ್ಧಿ ಒಂದೇ ಒಂದು ಕಾರ್ಯಕ್ರಮ ರೂಪಿಸಿಲ್ಲ. ಅದನ್ನು ಬಿಟ್ಟು ಜನರನ್ನು ಕಿತ್ತು ತಿನ್ನುವ ಕೆಲಸ ಮಾಡುತ್ತಿದೆ ಎಂದು ದೂರಿದರು.
25-07-2025ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿ ʼಬಿʼ ಖಾತೆ ಸ್ವತ್ತುಗಳಿಗೆ ʼಎʼ ಖಾತೆ ನೀಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಸಂಕಷ್ಟ ಉಂಟಾಗಿದೆ. ಆದರೆ ಈ ಸರಕಾರಕ್ಕೆ ಹಣ ಮಾಡುವುದೇ ಉದ್ದೇಶವಾಗಿದೆಯೇ ವಿನಾ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಅವರು ಹೇಳಿದರು.
ʼಎʼ ರಿಜಿಸ್ಟರ್ ನಲ್ಲಿಯೇ ʼಎʼ ಖಾತ ಆಸ್ತಿಗಳನ್ನು ನಿರ್ವಹಣೆ ಮಾಡಬೇಕು. ಅದೇ ರೀತಿ ʼಬಿʼ ಖಾತ ರಿಜಿಸ್ಟರ್ ನಲ್ಲಿಯೇ ʼಬಿʼ ಖಾತಾ ಆಸ್ತಿಗಳನ್ನು ನಿರ್ವಹಣೆ ಮಾಡಬೇಕು. ಸರಕಾರ ಇದನ್ನು ಮಾಡುತ್ತಿಲ್ಲ. ಯಾರಾದರೂ ಕೋರ್ಟ್ʼಗೆ ಹೋದರೆ ಸರಕಾರಕ್ಕೆ ಛೀಮಾರಿ ಎದುರಾಗುವುದು ಖಚಿತ. ಇಡೀ ದೇಶದಲ್ಲಿಯೇ ಎಲ್ಲಿಯೂ ನೋಡದ ರೀತಿಯಲ್ಲಿ ಕಾಂಗ್ರೆಸ್ ಸರಕಾರ ಬೆಂಗಳೂರು ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಅವರು ದೂರಿದರು.
ಜನ ವಿರೋಧಿ ತೆರಿಗೆ ಖಂಡಿಸಿ ಜೆಡಿಎಸ್ ಸರಕಾರದ ವಿರುದ್ಧ ಜನಾಂದೋಲನ ನಡೆಸುತ್ತದೆ. ನಮ್ಮ ಪಕ್ಷದ ವತಿಯಿಂದ ಕಾನೂನು ಹೋರಾಟವನ್ನೂ ಮಾಡುತ್ತೇವೆ. ಬೆಂಗಳೂರು ನಗರ ಹಾಗೆಯೇ ಉಳಿಯಬೇಕು. ಬೆಂಗಳೂರು ನಗರವನ್ನು ಐದು ಭಾಗವನ್ನಾಗಿ ಮಾಡಿದ್ದೇ ಇಂಥ ಸುಲಿಗೆ ಮಾಡಲು. ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಬಿಬಿಎಂಪಿಯನ್ನು ಛಿದ್ರ ಮಾಡಿದ್ದು ಬೆಂಗಳೂರಿಗರಿಗೆ ಎಸಗಿದ ಅನ್ಯಾಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಿಯಲ್ ಎಸ್ಟೇಟ್ ದಂಧೆಗೆ ಬೆಲೆ ಬರಬೇಕು ಎಂದು ಗ್ರೆಟರ್ ಬೆಂಗಳೂರು ಮಾಡಿದ್ದಾರೆ. ಇದಕ್ಕೆ ಜೆಡಿಎಸ್ ಒಪ್ಪಲ್ಲ. ಇದು ಸರ್ಕಾರದ ಬೇಜವಬ್ದಾರಿ ನಡೆ. ಬೆಂಗಳೂರು ನಗರವನ್ನು ಛಿದ್ರ ಮಾಡಲು ನಾವು ಬಿಡುವುದಿಲ್ಲ ಎಂದು ಅವರು ಹೇಳಿದರು.
ಕೋರ್ಟ್ ಮೊರೆ ಹೋಗುತ್ತೇವೆ
ʼಬಿʼ ಖಾತೆಗೆ ಎ ಖಾತಾ ಕೊಡುವುದನ್ನು ರಾಜ್ಯ ಸರಕಾರ ಹಿಂಬಾಗಿಲಿನಿಂದ ತಂದಿದೆ. ಖಾತೆ ಬದಲಾವಣೆಗೆ ಮೂರರಿಂದ ಆರು ಲಕ್ಷ ರೂಪಾಯಿ ಕೊಡಬೇಕಿದೆ. ಕೊಡದಿದ್ದರೆ ಆಸ್ತಿ ಸೀಜ್ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರದ ನಿವಾಸಿಗಳಿಗೆ ತೆರಿಗೆ ಕಟ್ಟಲು ಆಗಲ್ಲ. ಇದಕ್ಕೆ ಜೆಡಿಎಸ್ ವಿರೋಧ ಇದೆ. ಬೆಂಗಳೂರು ಜನರಿಗೆ ಸರಕಾರ ಮೋಸ ಮಾಡುತ್ತಿದೆ. ತೆರಿಗೆ ಅವೈಜ್ಞಾನಿಕವಾಗಿ ಕಟ್ಟಿಸಿಕೊಳ್ಳಲಾಗ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ತೆರಿಗೆ ಕಡಿಮೆ ಮಾಡದಿದ್ದರೆ ನಾವು ಕೋರ್ಟ್ ಮೊರೆ ಹೋಗುತ್ತೇವೆ. ಕಾಂಗ್ರೆಸ್ ಸರಕಾರ ಬಂದಾಗ ಬೆಂಗಳೂರು ನಗರವನ್ನು ಹಾಳು ಮಾಡುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು.
ಉದ್ಯೋಗ ವಾರ್ತೆ: ‘10,277 IBPS ಕ್ಲರ್ಕ್ ಹುದ್ದೆ’ಗಳಿಗೆ ಅಧಿಸೂಚನೆ, 24,000 ಸಂಬಳ | IBPS Clerk Notification
ರಾಜ್ಯ ಸರ್ಕಾರದಿಂದ ‘CET, NEET, JEE ತರಬೇತಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್