ಬೆಂಗಳೂರು : ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಂಜಾ ಮತ್ತು ಮಾದಕ ಪದಾರ್ಥಗಳ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಈ ಸಂಬಂಧ ಶಾಸಕ ದಿನೇಶ್ ಗೂಳಿಗೌಡ ಬರೆದಿದ್ದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದನೆ ನೀಡಿ, ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ಮಾದಕ ವ್ಯಸನಗಳಿಗೆ ಹೆಚ್ಚಿನ ಸಂಖ್ಯೆಯ ಮಕ್ಕಳು ಬಲಿಯಾಗುತ್ತಿರುವ ಬಗ್ಗೆ ಗಮನ ಸೆಳೆದಿದ್ದ ಶಾಸಕ ದಿನೇಶ್ ಗೂಳಿಗೌಡ ಅವರು, ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಆತಂಕಕಾರಿ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಎಚ್ಚರಿಸಿದ್ದರು.
ಗಾಂಜಾ ಮತ್ತು ಮಾದಕವಸ್ತುಗಳ ಹಾವಳಿ ನಿಯಂತ್ರಣಕ್ಕೆ ಜಿಲ್ಲಾ ಮಟ್ಟದಲ್ಲಿ ವಿಶೇಷ ದಳ ರಚನೆ ಸೇರಿ ಹಲವು ಕ್ರಮ ಕೈಗೊಳ್ಳಲು ಪತ್ರದಲ್ಲಿ ಮನವಿ ಮಾಡಿದ್ದರು.
ಶಿಕ್ಷಣ ಸಂಸ್ಥೆಗಳ ಸಮೀಪ ಸೇರಿದಂತೆ ರಾಜ್ಯದಲ್ಲಿ ಗಾಂಜಾ ಮಾರಾಟ ಮತ್ತು ಸೇವನೆ ಹೆಚ್ಚುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಮಹಾ ನಿರ್ದೇಶಕರು, ಈ ಬಗ್ಗ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿ, ಈ ಬಗ್ಗೆ ಪರಿಶೀಲನೆ ನಡೆಸಲು ನಿರ್ದೇಶನ ನೀಡಿದ್ದಾರೆ.
ಮಕ್ಕಳು ಭವಿಷ್ಯದ ರೂವಾರಿಗಳಾಗಿದ್ದು, ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳ ಸಮೀಪದಲ್ಲಿಯೇ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಸಂಬಂಧ ಕ್ರಮ ವಹಿಸಬೇಕು. ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಂಡು ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಶಾಸಕ ದಿನೇಶ್ ಗೂಳಿಗೌಡ ಪತ್ರದಲ್ಲೇನಿದೆ?
“ಮಕ್ಕಳು ದೇವರ ರಾಜ್ಯದ ಪ್ರಜೆಗಳು”. ರಾಷ್ಟ್ರಕವಿ ಕುವೆಂಪು ಅವರ ಈ ಮಾತು ಅಕ್ಷರಶಃ ಸತ್ಯ. ಆದರೆ, ಈ ನಾಡಿನಲ್ಲಿ ನಿಜಕ್ಕೂ ಏನಾಗುತ್ತಿದೆ? ಮಕ್ಕಳು ನೀತಿವಂತರಾಗಿ, ಸುಸಂಸ್ಕೃತರಾಗಿ, ದುಶ್ಚಟಗಳಿಲ್ಲದೇ ಕಲಿಕೆ ಮಾಡುತ್ತಿದ್ದಾರೆಯೇ? ಅಂಥದ್ದೊಂದು ಸುಂದರ ಜೀವನ ಅವರದ್ದಾಗಿದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಂಡಾಗ, ಸಿಗುವ ಉತ್ತರ “ಇಲ್ಲ”. ನಾನಿಂದು ಅತ್ಯಂತ ವಿಷಾದ ಹಾಗೂ ನೋವಿನಿಂದ ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಅದೂ ನೊಂದ ಮಕ್ಕಳ ಹಾಗೂ ಅವರ ಪೋಷಕರ ಪರವಾಗಿ ಸರ್ಕಾರದ ಗಮನಕ್ಕೆ ತರಲು ಬಯಸುತ್ತಿದ್ದೇನೆ. ಮಾದಕ ವ್ಯಸನಗಳಿಗೆ ಇಂದು ಅನೇಕ ಮಕ್ಕಳು ಬಲಿಯಾಗುತ್ತಿದ್ದಾರೆ. ಬದುಕನ್ನು ಕಟ್ಟಿಕೊಳ್ಳಬೇಕಾದ ಈ ಸಮಯದಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಇದನ್ನು ನಾವೀಗ ತಪ್ಪಿಸಬೇಕಿದೆ. ಮಕ್ಕಳಿಗೆ ಸುಸ್ಥಿರ ಬದುಕನ್ನು ಕಟ್ಟಿಕೊಡಲು ಬಲಿಷ್ಠ ಹಾಗೂ ಬಲಾಢ್ಯ ಕಾನೊನು ರೂಪಿಸಬೇಕಿದೆ.
ಹಾಗಂತ ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಹಲವು ದಶಕಗಳಿಂದ ಬೆನ್ನು ಹತ್ತಿರುವ ಪೆಡಂಭೂತವಾಗಿದೆ. ಈ ಮಧ್ಯೆ ಅನೇಕ ಸರ್ಕಾರಗಳು ಆಳಿ ಹೋಗಿವೆ. ಅದೆಷ್ಟೋ ದಕ್ಷ ಅಧಿಕಾರಿಗಳ ಅವಧಿಗಳು ಮುಗಿದು ಹೋಗಿವೆ. ಆದರೆ, ಇದುವರೆಗೂ ಇಂಥ ಸಮಸ್ಯೆಯನ್ನು ಬೇರು ಸಮೇತ ಕಿತ್ತೊಗೆಯಲು ಸಾಧ್ಯವೇ ಆಗಿಲ್ಲ. ಮಾದಕ ವ್ಯಸನಗಳಿಗೆ, ಗಾಂಜಾ ವಹಿವಾಟಿಗೆ ಪದೇ ಪದೇ ಮಕ್ಕಳು ಟಾರ್ಗೆಟ್ ಆಗುತ್ತಿರುವ ಬಗ್ಗೆ ನನಗೆ ಸಾಕಷ್ಟು ದೂರುಗಳು ಬಂದಿವೆ. ಅನೇಕ ಪಾಲಕರ ಅಳಲು ಹೀಗಾಗಿ ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುವುದು ಈಗಿನ ತುರ್ತು ಕ್ರಮಗಳಲ್ಲಿ ಒಂದು ಎಂಬುದು ನನ್ನ ಭಾವನೆಯಾಗಿದೆ.
ಏಕೆಂದರೆ ಗಾಂಜಾ ಹಾವಳಿ ದೊಡ್ಡ ಪಿಡುಗಿನಂತೆ ವ್ಯಾಪಿಸಿದೆ. ಇದರ ಸುಳಿಗೆ ಯುವಜನತೆ ದೊಡ್ಡ ಸಂಖ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಶೈಕ್ಷಣಿಕ ಬದುಕು ಮೂರಾಬಟ್ಟೆಯಾಗಿದೆ. ಗಾಂಜಾ ಖರೀದಿಗೆ ಹಣವಿಲ್ಲದೆ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಳ್ಳತನ, ಸುಲಿಗೆಗಳಿಗೆ ಕೆಲವರು ಇಳಿದಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಇದು ಪೋಷಕರನ್ನು ಕಂಗೆಡಿಸಿದೆ. ಈ ಸಕ್ರಿಯ ಜಾಲಕ್ಕೆ ಕೊನೆ ಹಾಡಲೇಬೇಕಿದೆ.
ಇದನ್ನು ಕೂಲಂಕಷವಾಗಿ ನೋಡುತ್ತಾ ಹೋದರೆ ಪೊಲೀಸರಿಗೆ ಮಾಹಿತಿ ಇದ್ದರೂ ಏಕೆ ಸುಮ್ಮನಿದ್ದಾರೆ ಎಂಬ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಆದರೆ, ಇನ್ನು ಮುಂದೆ ಹಾಗಾಗದೇ ಗಾಂಜಾ ಮಾರಾಟ ಹಾಗೂ ಸೇವನೆ ಜಾಲವನ್ನು ಬೇರು ಸಮೇತ ಕಿತ್ತೊಗೆಯಲು ತಾವು ಮುಂದಾಗಬೇಕು. ಇದಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಿ ತಪ್ಪಿತಸ್ಥರಿಗೆ ಕಾನೂನಿನಡಿ ಕ್ರಮವನ್ನು ಜರುಗಿಸಬೇಕು.
ಸರ್ಕಾರ ತಗೆದುಕೊಳ್ಳಬಹುದಾದ ಕ್ರಮಗಳು
i. ಜಿಲ್ಲಾ ಮಟ್ಟದಲ್ಲಿ ವಿಶೇಷ ದಳವನ್ನು ರಚಿಸುವುದು. ಆ ದಳಕ್ಕೆ ಮುಕ್ತ ಅಧಿಕಾರ ಮತ್ತು ಬೆಂಬಲ ನೀಡುವುದು
ii. ಸಾರ್ವಜನಿಕರ ಸಹಕಾರ ಪಡೆಯಲು ಸಹಾಯವಾಣಿಯನ್ನು ಆರಂಭಿಸುವುದು
iii. ಜನರು ಮುಕ್ತವಾಗಿ ಮಾಹಿತಿ ನೀಡುವಂತಾಗಲು ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿ ಇಡುವುದಾಗಿ ಮನವರಿಕೆ ಮಾಡುವುದು
iv. ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ವ್ಯವಸ್ಥೆ ಮಾಡುವುದು
v. ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು
vi. ಇಂಥ ಜಾಲದ ಬಗ್ಗೆ ಗಮನಕ್ಕೆ ಬಂದರೆ ಶಾಲಾ ಮುಖ್ಯಸ್ಥರು, ಇಲ್ಲವೇ ಪೋಷಕರ ಗಮನಕ್ಕೆ ತರುವಂತೆ ಮನವರಿಕೆ ಮಾಡುವುದು
ಕೂಡಲೇ ನಮ್ಮ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ದಿಟ್ಟ ಹೆಜ್ಜೆಯನ್ನಿಡಬೇಕು. ಈ ನಿಟ್ಟಿನಲ್ಲಿ ಕೈಗೊಳ್ಳಲು ಮನವಿ ಮಾಡಿದ್ದರು.
Namma Metro: ‘ನಮ್ಮ ಮೆಟ್ರೋ’ ಪ್ರಯಾಣಿಕರ ಗಮನಕ್ಕೆ: ಫೆ.11ರಂದು ಈ ಮಾರ್ಗದಲ್ಲಿ ‘ಸಂಚಾರ ಸ್ಥಗಿತ’
ಭಾರತದಲ್ಲಿ Snapchat ಸರ್ವರ್ ಡೌನ್ : ಕಂಟೆಂಟ್ ‘ಅಪ್‌ಲೋಡ್’ ಸಮಸ್ಯೆ ಎದುರಿಸಿದ ಬಳಕೆದಾರರು