ಬೆಂಗಳೂರು: ಸಂವಿಧಾನ ಬದ್ಧವಾಗಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಬೆಂಬಲವಾಗಿ ನಿಲ್ಲಲು ಇಂದು ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಚಿವರು, ವಿಧಾನಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಗೂ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಬಹುಮತದ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ತಿಳಿಸಿದರು.
ಖಾಸಗಿ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಮುಖಂಡರ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಸ್ತುತವಾಗಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಯಲ್ಲಿ ಹಿಂದುಳಿದ ವರ್ಗದ ಸಮಸ್ಯೆ ಜನರು ಸಕ್ರಿಯವಾಗಿ ಭಾಗವಹಿಸಬೇಕು ಹಾಗೂ ಅದನ್ನು ಯಶಸ್ವಿಗೊಳಿಸಬೇಕು. ಇದಕ್ಕಾಗಿ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಹಾಗೂ ಹಿಂದುಳಿದ ವರ್ಗಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲಾಯಿತು. ಸಮೀಕ್ಷೆ ಸಂವಿಧಾನ ಬದ್ಧವಾದ ಹಕ್ಕು ಹಿಂದುಳಿದ ಜಾತಿಗಳು ಆರ್ಥಿಕವಾಗಿ ರಾಜಕೀಯ ವಾಗಿ ಶೈಕ್ಷಣಿಕ ಸೌಲಭ್ಯ ಪಡೆಯಲು ಸಮೀಕ್ಷೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಭಾಗವಹಿಸಲು ಜನರನ್ನು ಪ್ರೇರೇಪಿಸಬೇಕು ಎಂದು ಒಕ್ಕೊರಲಿನಿಂದ ನಿರ್ಧರಿಸಲಾಯಿತು ಎಂದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಮಾತನಾಡಿ, ಈ ದಿನ ಐತಿಹಾಸಿಕ ಸಭೆ ನಡೆದಿದೆ. ಹಿಂದುಳಿದ ವರ್ಗ ಎಂದು ಗುರುತಿಸಿಕೊಂಡ ಸಚಿವರು, ಶಾಸಕರು ಬಂದಿದ್ದಾರೆ. ಈ ಸಭೆ ಮೊದಲೇ ಆಗಬೇಕಿತ್ತು. ನಮ್ಮ ದೇಶ ಪ್ರಜಾಪ್ರಭುತ್ವ ಅಡಿಯಲ್ಲಿ ನಡೆಯಬೇಕು. ಹಿಂದುಳಿದ ವರ್ಗಗಳಿಗೆ ಸರಿಯಾದ ಮೀಸಲಾತಿ ಸಿಗಬೇಕು. ಸಾಮಾಜಿಕ, ಶೈಕ್ಷಣಿಕ ಹಕ್ಕನ್ನ ಕಸಿಯಲು ಸಾದ್ಯವಿಲ್ಲ. ಇದನ್ನ ವಿರೋಧಿಸುವ ಕೆಲಸ ಆಗಬಾರದು. ಕೇಲ್ಕರ್ ಆಯೋಗ, ಮಂಡಲ ಆಯೋಗ ಮಾಡಿದಾಗಲೂ ವಿರೋಧ ಬಂದಿತ್ತು. ಆದರೂ ಕಾಂಗ್ರೆಸ್ ಪಕ್ಷ ಮಂಡಲ ಆಯೋಗ ವರದಿ ಜಾರಿ ಮಾಡಿತು.
ಮಂಡಲ ಆಯೋಗ ಶಿಫಾರಸು ಜಾರಿ ಆದಮೇಲೆ ಹಿಂದುಳಿದ ವರ್ಗಗಳಿಗೆ ಸೆಂಟ್ರಲ್ ಸರ್ವೀಸ್ ನಲ್ಲಿ ಮೀಸಲಾತಿ ಅವಕಾಶ ಸಿಕ್ಕಿದೆ. ಸಿದ್ದರಾಮಯ್ಯ ಅವರಿಗೆ ಸಮಾನತೆ ಬಗ್ಗೆ ಕಾಳಜಿ ಇದೆ. ಯಾರು ತುಳಿಯಲ್ಪಟ್ಟಿದ್ದಾರೆ ಅವರನ್ನ ಮೇಲೆತ್ತುವ ಕೆಲಸ ಮಾಡಲು ಹೊರಟ್ಟಿದ್ದಾರೆ. ಕಾಂತರಾಜ್ ಆಯೋಗದ ವರದಿ ಬಗ್ಗೆ ಆಕ್ಷೇಪ ಕೇಳಿ ಬಂದಿದ್ರಿಂದ ಹೊಸದಾಗಿ ಮಾಡಲು ಹೊರಟಿದ್ದು. ಈಗ ಅದಕ್ಕೂ ವಿರೋಧ ಮಾಡಲು ಹೊರಟ್ಟಿದ್ದಾರೆ.
ಈ ರೀತಿ ತಡೆ ಒಡ್ಡಲು ಹೋದ್ರೆ ಏನಾಗತ್ತೆ ಅಂತ ಗೊತ್ತಿದೆ. ಇದು ಒಂದು ವರ್ಗದ ಪ್ರಶ್ನೆ ಅಲ್ಲ. ಇವತ್ತು ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಜಿಲ್ಲೆ ಜಿಲ್ಲೆಗಳಲ್ಲೂ ಜಾಗೃತಿ ಮೂಡಿಸುವ ಕೆಲಸ ಆಗಿದೆ. ನಾವೆಲ್ಲಾ ಧ್ರುವೀಕರಣ ಮಾಡಿಕೊಂಡು ಆಯೋಗಕ್ಕೆ ಭೇಟಿ ನೀಡಲಿದ್ದೇವೆ. ನಾವೆಲ್ಲಾ ಹೋಗಿ ಹಿಂದುಳಿದ ವರ್ಗಗಳ ಆಯೋಗಕ್ಕೆ ನಿಯೋಗ ಹೋಗಿ ಮನವರಿಕೆ ಮಾಡಿಕೊಡ್ತೀವಿ. *ಜೊತೆಗೆ ಹಿಂದುಳಿದ ವರ್ಗಗಳ ಸಚಿವರು ಸಮುದಾಯಗಳಿಗೆ ಜಾಗೃತಿ ಮೂಡಿಸಲು ತೀರ್ಮಾನ ಮಾಡಿದ್ದೇವೆ. ನಾವು ಜಿಲ್ಲೆ ಜಿಲ್ಲೆಗಳಿಗೆ ಹೋಗಿ ಹಿಂದುಳಿದ ವರ್ಗಗಳ ನಾಯಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ಪ್ರಣಾಳಿಕೆಯಲ್ಲಿ ನಾವು ಹೇಳಿದ್ವಿ. ಜನರಿಗೆ ಕೊಟ್ಟ ಆಶ್ವಾಸ ಮೂಲಕ ಸಮೀಕ್ಷೆ ಮಾಡಲು ಹೊರಟಿದ್ದೇವೆ. ಅಹಿಂದ, ಮೀಸಲಾತಿ ವಿರುದ್ಧ ಇರುವವರು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಸರ್ಕಾರ ಇದನ್ನ ಅನುಷ್ಠಾನಕ್ಕೆ ತರುತ್ತಿದೆ. ಸಂವಿಧಾನದ ಆಶಯ ಜಾರಿಗೆ ತರಲು ನಮ್ಮ ಪ್ರಯತ್ನ. ಬಡವರಿಗೆ ಕಾರ್ಯಕ್ರಮ ಕೊಡದಿರುವ ಪಕ್ಷ ಅಂದ್ರೆ ಬಿಜೆಪಿ. ಜನ ಜಾಗೃತಿಗಾಗಿ ಇವತ್ತು ಅಹಿಂದ ನಾಯಕರು ಸಭೆ ಸೇರಿದ್ದೇವೆ. 197 ಹಿಂದುಳಿದ ಜಾತಿಗಳ ಅಂಕಿಅಂಶಗಳ ಗೊತ್ತಾಗಬೇಕು. ಯಾರು ಎಷ್ಟು ಹಿಂದುಳಿದಿದ್ದಾರೆ ಎಂದು ತಿಳಿಯಲು ಈ ಸಮೀಕ್ಷೆ ಅಗತ್ಯ ಇದೆ ಎಂದರು.
ಸಭೆಯಲ್ಲಿ ಸಚಿವರಾದ ಸಂತೋಷ್ ಲಾಡ್, ಮಧು ಬಂಗಾರಪ್ಪ, ಬಿ.ಎ ಸುರೇಶ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ವಿಧಾನಪರಿಷತ್ ಸದಸ್ಯ, ಹಿರಿಯ ಮುಖಂಡರಾದ ಬಿ.ಕೆ. ಹರಿಪ್ರಸಾದ್ ಸೇರಿದಂತೆ, ಹಿಂದುಳಿದ ವರ್ಗಗಳಿಗೆ ಸೇರಿದ ಹಿರಿಯ ನಾಯಕರುಗಳು, ಸಚಿವರು ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರುಗಳು ಭಾಗವಹಿಸಿದ್ದರು.
‘ಕುಸುಮ್ ಸಿ’ಯೋಜನೆಗೆ ಭೂಮಿ ನೀಡಿ ಸಹಕರಿಸಿ: ಬೆಸ್ಕಾಂ ಎಂಡಿ ಡಾ.ಎನ್.ಶಿವಶಂಕರ್