ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ಹಳಿತಪ್ಪಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಕಠಿಣ ‘ನೌಕಾ ದಿಗ್ಬಂಧನ’ (Naval Blockade) ವಿಧಿಸುವ ಮುನ್ಸೂಚನೆ ನೀಡಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆದ ಸಂಧಾನ ಸಭೆಗಳು ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿದ್ದು, ಇರಾನ್ ಮೇಲೆ ಬಲಪ್ರಯೋಗಕ್ಕೆ ಅಮೆರಿಕ ಸಜ್ಜಾಗುತ್ತಿದೆ ಎಂಬ ಚರ್ಚೆ ಶುರುವಾಗಿದೆ.
ಕಳೆದ ಕೆಲವು ದಿನಗಳಿಂದ ಇಸ್ಲಾಮಾಬಾದ್‌ನಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದಲ್ಲಿ ಇರಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆದಿತ್ತು. ಆದರೆ, ‘ಹಾರ್ಮುಜ್ ಜಲಸಂಧಿ’ (Strait of Hormuz) ಮತ್ತು ಅಣುಶಕ್ತಿ ಕಾರ್ಯಕ್ರಮದ ವಿಚಾರವಾಗಿ ಉಭಯ ರಾಷ್ಟ್ರಗಳ ನಡುವೆ ಒಮ್ಮತ ಮೂಡದ ಕಾರಣ ಮಾತುಕತೆ ಮುರಿದುಬಿದ್ದಿದೆ. “ಇರಾನ್ ನಮ್ಮ ಷರತ್ತುಗಳನ್ನು ಒಪ್ಪುತ್ತಿಲ್ಲ, ಹೀಗಾಗಿ ನಾವು ಮಾತುಕತೆಯಿಂದ ಹೊರಬರುತ್ತಿದ್ದೇವೆ,” ಎಂದು ಜೆ.ಡಿ. ವ್ಯಾನ್ಸ್ ತಿಳಿಸಿದ್ದಾರೆ.
ಮಾತುಕತೆ ವಿಫಲವಾದ ಕೆಲವೇ ಗಂಟೆಗಳಲ್ಲಿ ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಇರಾನ್ ಮೇಲೆ ನೌಕಾ ದಿಗ್ಬಂಧನ ವಿಧಿಸುವ ಮೂಲಕ ಅದರ ತೈಲ ರಫ್ತನ್ನು ಸಂಪೂರ್ಣವಾಗಿ ತಡೆಯುವ ಮತ್ತು ಆರ್ಥಿಕತೆಯನ್ನು ಹೈರಾಣಾಗಿಸುವ ಆಯ್ಕೆಯನ್ನು ಉಲ್ಲೇಖಿಸಲಾಗಿದೆ. ಈ ಹಿಂದೆ ವೆನೆಜುವೆಲಾದಲ್ಲಿ ಬಳಸಿದ ತಂತ್ರವನ್ನೇ ಇರಾನ್ ವಿರುದ್ಧವೂ ಪ್ರಯೋಗಿಸಲು ಟ್ರಂಪ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಅಮೆರಿಕ ತನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾದರೆ, ಅದು ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾಗಬಹುದು. ತೈಲ ರಫ್ತು ನಿಂತರೆ ಇರಾನ್ ಆರ್ಥಿಕವಾಗಿ ‘ಶಿಲಾಯುಗ’ಕ್ಕೆ ತಳ್ಳಲ್ಪಡಬಹುದು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಪರ್ಷಿಯನ್ ಕೊಲ್ಲಿಯಲ್ಲಿ ಈಗಾಗಲೇ ಅಮೆರಿಕದ ಬೃಹತ್ ಯುದ್ಧ ನೌಕೆಗಳಾದ ಯುಎಸ್ಎಸ್ ಜೆರಾಲ್ಡ್ ಫೋರ್ಡ್ ಮತ್ತು ಯುಎಸ್ಎಸ್ ಅಬ್ರಹಾಂ ಲಿಂಕನ್ ಬೀಡುಬಿಟ್ಟಿವೆ. ಒಂದೆಡೆ ಇರಾನ್ ತನ್ನ ಹಿತಾಸಕ್ತಿಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಟ್ರಂಪ್ “ನಾವು ಗೆದ್ದೇ ಗೆಲ್ಲುತ್ತೇವೆ” ಎಂಬ ಧಾಟಿಯಲ್ಲಿ ಮಾತನಾಡುತ್ತಿರುವುದು ಈ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.








