ನೋಯ್ಡಾ: ಕಳೆದ ಒಂದು ವಾರದಿಂದ ಬ್ಯಾಡ್ಮಿಂಟನ್ ಅಂಗಳದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ‘ಜೈಂಟ್ ಕಿಲ್ಲರ್’ ಎನಿಸಿಕೊಂಡಿದ್ದ ಭಾರತದ ಯುವ ಆಟಗಾರ ಆಯುಷ್ ಶೆಟ್ಟಿ ಅವರ ಕನಸಿನ ಓಟ ಫೈನಲ್‌ನಲ್ಲಿ ಅಂತ್ಯಗೊಂಡಿದೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಆಯುಷ್, ವಿಶ್ವದ ನಂ.1 ಆಟಗಾರ ಚೀನಾದ ಶಿ ಯು ಕಿ ವಿರುದ್ಧ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಅನುಭವಿ ಶಿ ಯು ಕಿ ವಿರುದ್ಧದ ಹಣಾಹಣಿಯಲ್ಲಿ ಆಯುಷ್ ಶೆಟ್ಟಿ ಆರಂಭದಲ್ಲಿ ಉತ್ತಮ ಪೈಪೋಟಿ ನೀಡಿದರು. ಆದರೆ, ಚೀನಾ ಆಟಗಾರನ ವೇಗ ಮತ್ತು ನಿಖರ ಸ್ಮ್ಯಾಶ್‌ಗಳ ಮುಂದೆ ಭಾರತದ ಆಟಗಾರನ ಹೋರಾಟ ಮಂಕಾಯಿತು. ಅಂತಿಮವಾಗಿ ಶಿ ಯು ಕಿ 21-15, 21-12 ನೇರ ಸೆಟ್‌ಗಳಿಂದ ಆಯುಷ್ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು.
ಫೈನಲ್‌ನಲ್ಲಿ ಸೋತರೂ ಸಹ, ಈ ಟೂರ್ನಿಯಲ್ಲಿ ಆಯುಷ್ ಶೆಟ್ಟಿ ತೋರಿದ ಪ್ರದರ್ಶನ ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತದ್ದು.
ಸೆಮಿಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಕುನ್ಲವುಟ್ ವಿಟಿಡ್ಸರ್ನ್ ಅವರನ್ನು ಸೋಲಿಸುವ ಮೂಲಕ ಆಯುಷ್ ದೊಡ್ಡ ಸಂಚಲನ ಮೂಡಿಸಿದ್ದರು.ಈ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಏಷ್ಯಾ ಮಟ್ಟದಲ್ಲಿ ದೊಡ್ಡ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.








