ಬ್ಯಾಂಕಾಕ್: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಆಯುಷ್ ಶೆಟ್ಟಿ ಈಗ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಪ್ರತಿಷ್ಠಿತ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನ ಸೆಮಿಫೈನಲ್ನಲ್ಲಿ ವಿಶ್ವದ ನಂಬರ್ 1 ಆಟಗಾರ ಹಾಗೂ ಹಾಲಿ ವಿಶ್ವ ಚಾಂಪಿಯನ್ ಕುನ್ಲವುತ್ ವಿಟಿಡ್ಸರ್ನ್ ಅವರನ್ನು ಮಣಿಸಿ ಆಯುಷ್ ಫೈನಲ್ ಪ್ರವೇಶಿಸಿದ್ದಾರೆ.
ಅನುಭವಿ ಮತ್ತು ವಿಶ್ವದ ಶ್ರೇಷ್ಠ ಆಟಗಾರ ಕುನ್ಲವುತ್ ಎದುರು ಆಯುಷ್ ಅದ್ಭುತ ಪ್ರದರ್ಶನ ನೀಡಿದರು. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಅವರು, ಥೈಲ್ಯಾಂಡ್ನ ಆಟಗಾರನಿಗೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.
ಕೇವಲ ಎರಡು ನೇರ ಸೆಟ್ಗಳ ಅಂತರದಲ್ಲಿ (21-18, 21-16) ಗೆಲುವು ಸಾಧಿಸಿದ ಆಯುಷ್, ಅಂತರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ವೃತ್ತಿಜೀವನದ ಶ್ರೇಷ್ಠ ಗೆಲುವನ್ನು ದಾಖಲಿಸಿದರು.ಈ ಗೆಲುವಿನೊಂದಿಗೆ ಆಯುಷ್ ಶೆಟ್ಟಿ ಈಗ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದ್ದು, ಭಾರತಕ್ಕೆ ಚಿನ್ನದ ಪದಕ ತಂದುಕೊಡುವ ಭರವಸೆ ಮೂಡಿಸಿದ್ದಾರೆ.
ಭಾರತದ ಜೂನಿಯರ್ ಸರ್ಕ್ಯೂಟ್ನಲ್ಲಿ ಮಿಂಚಿದ್ದ ಆಯುಷ್ ಶೆಟ್ಟಿ, ಈ ಹಿಂದೆ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈಗ ಸೀನಿಯರ್ ಮಟ್ಟದಲ್ಲೂ ವಿಶ್ವದ ನಂಬರ್ 1 ಆಟಗಾರನನ್ನೇ ಸೋಲಿಸುವ ಮೂಲಕ ಭಾರತದ ಬ್ಯಾಡ್ಮಿಂಟನ್ನ ಮುಂದಿನ ಸೂಪರ್ ಸ್ಟಾರ್ ತಾನು ಎಂಬುದನ್ನು ಸಾಬೀತುಪಡಿಸಿದ್ದಾರೆ.








