ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಮತ್ತು ಇತರ 61 ಮಂದಿ ವಿರುದ್ಧ ರೋಮ್ ಶಾಸನದ 15ನೇ ವಿಧಿಯಡಿ ನೆದರ್ಲ್ಯಾಂಡ್ಸ್ನ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ (ಐಸಿಸಿ) ದೂರು ದಾಖಲಿಸಲಾಗಿದೆ.
ಅವಾಮಿ ಲೀಗ್ ಮುಖಂಡ ಮತ್ತು ಸಿಲ್ಹೆಟ್ನ ಮಾಜಿ ಮೇಯರ್ ಅನ್ವರುಝಮಾನ್ ಚೌಧರಿ ದೂರು ದಾಖಲಿಸಿದ್ದಾರೆ.
“ಆಗಸ್ಟ್ 5 ರಿಂದ 8 ರವರೆಗೆ, ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಚಳವಳಿಯ ಹೆಸರಿನಲ್ಲಿ, ಬಾಂಗ್ಲಾದೇಶ್ ಅವಾಮಿ ಲೀಗ್ ಮತ್ತು ಅದರ ವಿವಿಧ ಅಂಗಸಂಸ್ಥೆಗಳು, ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂಗಳು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ಬಾಂಗ್ಲಾದೇಶದ ಪೊಲೀಸ್ ಪಡೆಗಳು ಕ್ರೂರ ನರಮೇಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಬಲಿಯಾಗಿವೆ” ಎಂದು ಅನ್ವರುಝಮಾನ್ ಚೌಧರಿ ಅವಾಮಿ ಲೀಗ್ನ ಪರಿಶೀಲಿಸಿದ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
“ಈ ನಿಟ್ಟಿನಲ್ಲಿ, ನಾವು ಎಲ್ಲಾ ಸಂಗತಿಗಳು ಮತ್ತು ಪುರಾವೆಗಳನ್ನು ಐಸಿಸಿಗೆ ಸಲ್ಲಿಸಿದ್ದೇವೆ” ಎಂದು ಅವರು ಹೇಳಿದರು.
ಯೂನುಸ್ ಹೊರತುಪಡಿಸಿ, ಈ 62 ಆರೋಪಿಗಳಲ್ಲಿ ಯೂನುಸ್ ಅವರ ಕ್ಯಾಬಿನೆಟ್ನ ಎಲ್ಲಾ ಸದಸ್ಯರು ಮತ್ತು ತಾರತಮ್ಯ ವಿರೋಧಿ ಒಕ್ಕೂಟದ ವಿದ್ಯಾರ್ಥಿ ನಾಯಕರು ಸೇರಿದ್ದಾರೆ. ಮೂಲ ದೂರಿಗೆ ಸುಮಾರು 800 ಪುಟಗಳ ದಾಖಲೆಗಳನ್ನು ಲಗತ್ತಿಸಲಾಗಿದೆ ಎಂದು ವೀಡಿಯೊ ಸಂದೇಶದಲ್ಲಿ ತಿಳಿಸಲಾಗಿದೆ.
ಶೀಘ್ರದಲ್ಲೇ ಐಸಿಸಿಯಲ್ಲಿ ಇಂತಹ ಇನ್ನೂ 15,000 ದೂರುಗಳನ್ನು ದಾಖಲಿಸಲು ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ. ಪೀಡಿತ ವ್ಯಕ್ತಿಗಳು ಒಬ್ಬೊಬ್ಬರಾಗಿ ದೂರುಗಳನ್ನು ದಾಖಲಿಸುತ್ತಾರೆ ಎಂದು ಅದು ಹೇಳಿದೆ.