ಬೆಂಗಳೂರು : ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ (ಎಂಸಿಸಿ) ರಾಜ್ಯದ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ತಲಾ 50 ಸೀಟುಗಳಂತೆ ಒಟ್ಟು 200 ಸೀಟು ಹೆಚ್ಚುವರಿಯಾಗಿ ಮಂಜೂರು ಮಾಡಿದ್ದು, ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅ.15ರಂದು ಬೆಳಿಗ್ಗೆ 8 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
3ನೇ ಸುತ್ತಿಗೆ 377 ವೈದ್ಯಕೀಯ ಸೀಟು ಲಭ್ಯ ಇದ್ದು, ಅದರ ಜತೆಗೆ ಹೆಚ್ಚುವರಿಯಾಗಿ 200 ಸೀಟು ಸೇರ್ಪಡೆ ಆಗಿದೆ. ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ 10,216 ವೈದ್ಯಕೀಯ ಸೀಟು ಲಭ್ಯವಾದಂತಾಗಲಿದೆ. ಇದಲ್ಲದೆ, ಈ ಸುತ್ತಿಗೆ 180 ದಂತ ವೈದ್ಯಕೀಯ ಸೀಟುಗಳು ಹಂಚಿಕೆಗೆ ಲಭ್ಯ ಇವೆ ಎಂದು ಅವರು ತಿಳಿಸಿದ್ದಾರೆ.
ಶಿವಮೊಗ್ಗದ ಸುಬ್ಬಯ್ಯ, ಬೆಂಗಳೂರು ನಾಗರೂರಿನ ಬಿಜಿಎಸ್, ತುಮಕೂರಿನ ಶ್ರೀದೇವಿ, ಮಂಗಳೂರಿನ ಎ.ಜೆ. ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿ ಸೀಟು ಹಂಚಿಕೆ ಮಾಡಿದ್ದು, ಅವುಗಳ ಪ್ರವೇಶಕ್ಕೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಈ ಕಾಲೇಜುಗಳ ಶುಲ್ಕವನ್ನು ಗಮನಿಸಿ ಆಪ್ಷನ್ಸ್ ದಾಖಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಈಗಾಗಲೇ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿ ಕಾಲೇಜುಗಳಿಗೆ ವರದಿ ಮಾಡಿಕೊಂಡವರು ಕೂಡ ಇಚ್ಛೆ ಇದ್ದಲ್ಲಿ ಈ ನಾಲ್ಕು ಕಾಲೇಜುಗಳ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು. ಅಂತಹವರು ಅ.15ರಂದು ಬೆಳಿಗ್ಗೆ 11ರಿಂದ ಅ.16ರಂದು ಬೆಳಿಗ್ಗೆ 8 ಗಂಟೆವರೆಗೆ ಆಪ್ಷನ್ಸ್ ದಾಖಲಿಸಬಹುದು. ಇವರು ಈಗಾಗಲೇ ಶುಲ್ಕ ಕಟ್ಟಿರುವ ಕಾರಣ ಮುಂಗಡ ಶುಲ್ಕ ಕಟ್ಟುವ ಅಗತ್ಯ ಇರುವುದಿಲ್ಲ. ಆದರೆ ಯಾರಿಗೆ ಸೀಟು ಹಂಚಿಕೆಯಾಗಿಲ್ಲವೊ ಅಂತಹವರು ಮುಂಗಡ ಶುಲ್ಕ ಕಟ್ಟಬೇಕು. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದರೆ ಪ್ರವೇಶ ಪಡೆಯುವುದು ಕಡ್ಡಾಯ ಎಂದು ಅವರು ಸಲಹೆ ನೀಡಿದ್ದಾರೆ.
ರದ್ದಾಗೊಳ್ಳಬಹುದಾದ ಅಥವಾ ಸೀಟು ಹಂಚಿಕೆ ಕಾರ್ಯದಲ್ಲಿ ಉದ್ಭವಿಸುವ ಸೀಟುಗಳನ್ನೂ ಸಹ ಹಂಚಿಕೆ ಮಾಡುವುದರಿಂದ, ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಸೀಟುಗಳ ಲಭ್ಯತೆ ತೋರಿಸದಿದ್ದರೂ ಅಭ್ಯರ್ಥಿಗಳು ಅಂತಹ ಕಾಲೇಜುಗಳಿಗೆ ಆಪ್ಷನ್ಸ್ ದಾಖಲಿಸಬಹುದು ಎಂದು ಅವರು ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಹುಚ್ಚುತನಕ್ಕೆ ಮಲ್ಲಿಕಾರ್ಜುನ ಖರ್ಗೆಗೆ ಅಪಮಾನ: ಛಲವಾದಿ ನಾರಾಯಣಸ್ವಾಮಿ
SHOCKING : ರಾಜ್ಯದಲ್ಲಿ ‘ಪೈಶಾಚಿಕ ಘಟನೆ’ : ಯುವತಿ ಮೇಲೆ ಗ್ಯಾಂಗ್ ರೇಪ್, ಚಿನ್ನ ಕದ್ದು ಕಾಮುಕರು ಎಸ್ಕೇಪ್.!